ದಕ್ಷಿಣ ಆಫ್ರಿಕ ಗಣರಾಜ್ಯ -
	ಆಫ್ರಿಕ ಖಂಡದ ದಕ್ಷಿಣ ತುದಿಯ ಗಣರಾಜ್ಯ.  ದ.ಅ. 220-350 ನಡುವಣ ಇದೆ.  ವಾಯುವ್ಯದಲ್ಲಿ ನೈಋತ್ಯ ಆಫ್ರಿಕ (ನಮಿಬಿಯ), ಉತ್ತರದಲ್ಲಿ ಬಾಟ್ಸ್ವಾನ ಮತ್ತು ಜಿಂಬಾಬ್ವೆ, ಪೂರ್ವದಲ್ಲಿ ಮೊಜಾóಂಬಿಕ್ ಮತ್ತು ಸ್ವಾಜಿûೀಲ್ಯಾಂಡ್, ಆಗ್ನೇಯ ಮತ್ತು ದಕ್ಷಿಣದಲ್ಲಿ ಹಿಂದೂ ಸಾಗರ, ದಕ್ಷಿಣ ಮತ್ತು ನೈಋತ್ಯದಲ್ಲಿ ಅಟ್ಲಾಂಟಿಕ್ ಸಾಗರ ಇವು ಇದರ ಮೇರೆಗಳು. ಈ ಗಣರಾಜ್ಯದ ಪೂರ್ವ ಭಾಗದಲ್ಲಿ ಇದರ ನಡುವೆ ಲೆಸೋತೋ ಎಂಬ ಸ್ವತಂತ್ರ ದೇಶವಿದೆ. 2,954 ಕಿ.ಮೀ. ಸಮುದ್ರ ತೀರವಿರುವ ದಕ್ಷಿಣ ಆಫ್ರಿಕ ಗಣರಾಜ್ಯ ಪೂರ್ವ ಪಶ್ಚಿಮವಾಗಿ 1,625 ಕಿ.ಮೀ. ಇದ್ದು ಒಟ್ಟು ವಿಸ್ತೀರ್ಣ 12,21,037 ಚ.ಕಿಮೀ. ಜನಸಂಖ್ಯೆ 4,68,88,200 (ಜುಲೈ 2005). ಆಡಳಿತ ಕೇಂದ್ರ ಪ್ರಿಟೊರಿಯ, ವಿಧಾನ (ಲೆಜಿಸ್ಲೆಟಿವ್) ಕೇಂದ್ರ ಕೇಪ್ ಟೌನ್;  ನ್ಯಾಯಾಡಳಿತ ಕೇಂದ್ರ ಬ್ಲೂಮ್‍ಫಾಂಟೇನ್.
8,25,418 ಚ.ಕಿ.ಮೀ. ವಿಸ್ತೀರ್ಣವಿರುವ ನೈಋತ್ಯ ಆಫ್ರಿಕದ ಆಡಳಿತವನ್ನೂ ದಕ್ಷಿಣ ಆಫ್ರಿಕವೇ ನಡೆಸುತ್ತಿತ್ತು. ಇದು ಹಿಂದೆ ಜರ್ಮನಿಯ ವಸಾಹತಾಗಿತ್ತು. ಒಂದನೆಯ ಮಹಾಯುದ್ಧದ ಅನಂತರ ರಾಷ್ಟ್ರಗಳ ಕೂಟ (ಲೀಗ್ ಅಫ್ ನೇಷನ್ಸ್) ಇದನ್ನು ದಕ್ಷಿಣ ಆಫ್ರಿಕದ ಪ್ರದೇಶಾಧೀನಕ್ಕೆ (ಮ್ಯಾಂಡೇಟ್) ಒಳಪಡಿಸಿತು. ಈ ಪ್ರದೇಶವನ್ನು 1968ರಲ್ಲಿ ವಿಶ್ವಸಂಸ್ಥೆ ನಮೀಬಿಯ ಎಂದು ಹೆಸರಿಸಿತು. 21, ಮಾರ್ಚಿ 1990ರಂದು ಇಂದು ಒಂದು ಸ್ವತಂತ್ರ ಗಣರಾಜ್ಯವಾಯಿತು. ಕೇಪ್ ಟೌನ್‍ನ ಆಗ್ನೇಯಕ್ಕೆ 1,932 ಕಿ.ಮೀ. ದೂರದಲ್ಲಿ, ಅಂಟಾರ್ಕ್‍ಟಿಕ್‍ನ ಹೊರವಲಯದಲ್ಲಿ, ಇರುವ ಪ್ರಿನ್ಸ್ ಎಡ್ವರ್ಡ್ ಮತ್ತು ಮರೀಯಾನ್ ಎಂಬ ಎರಡು ಪುಟ್ಟ ದ್ವೀಪಗಳೂ ದಕ್ಷಿಣ ಆಫ್ರಿಕ ಗಣರಾಜ್ಯಕ್ಕೆ ಸೇರಿವೆ.
											  (ವಿ.ಜಿ.ಕೆ.)
ಪ್ರಾಕೃತಿಕ ಭೂವಿವರಣೆ

ಭೂವಿಜ್ಞಾನ :  ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳ ನಡುವೆ ಆಫ್ರಿಕ ಖಂಡದ ದಕ್ಷಿಣ ತುದಿಯಲ್ಲಿರುವ ರಾಜ್ಯವೇ ದಕ್ಷಿಣ ಆಫ್ರಿಕ ಗಣರಾಜ್ಯ. ಇದರ ಬಹುಭಾಗ ಪ್ರಸ್ಥಭೂಮಿ (3000-5000 ಅಡಿ ಎತ್ತರ) ಸುತ್ತ ಕರಾವಳಿ ಬಯಲು, ಇವೆರಡರ ಮಧ್ಯೆ ಕಡಿದಾದ ಇಳಿಜಾರು.

ಅತ್ಯಂತ ಪುರಾತನ ಕಾಲದ ಶಿಲೆಗಳನ್ನು ಆದಿಮ (ಪ್ರಿಮಿಟಿವ್) ಶಿಲಾ ಸ್ತೋಮ ಎಂದು ಕರೆಯಲಾಗಿದೆ. ಇವು ಪ್ರಪಂಚದ ಇತರ ಕಡೆಗಳಲ್ಲಿರುವ ಆರ್ಷೇಯ ಕಲ್ಪದ ಶಿಲೆಗಳಿಗೆ ಸರಿದೂಗುತ್ತದೆ. ಇವುಗಳಲ್ಲಿ ಹಾರ್ನ್‍ಬ್ಲೆಂಡ್ ಷಿಸ್ಟ್, ಅಂಫಿಬೊಲೈಟ್, ಕ್ಲೋರೈಟ್ ಷಿಸ್ಟ್, ಗ್ರೀನ್ ಸ್ಟೋನ್, ಪಟ್ಟೆಕಬ್ಬಿಣ, ಬೆಣಚುಶಿಲೆ, ಪೆಂಟೆಶಿಲೆ ಸುಣ್ಣಶಿಲೆ ಮುಂತಾದ ವಿವಿಧ ಬಗೆಯ ಶಿಲೆಗಳಿರುವುವು. ಇವು ಮೈಸೂರು ಪ್ರಾಂತದ ಧಾರವಾಡ ಶಿಲಾಸ್ತೋಮವನ್ನು ಹೋಲುತ್ತವೆ.  ಇವುಗಳಲ್ಲಿ ಗ್ರ್ಯಾನೈಟುಗಳು ಅಂತಸ್ಸರಣವಾಗಿವೆ. ಇವಕ್ಕೆ ಹಳೆ ಗ್ರ್ಯಾನೈಟು ಎಂದು ಕರೆಯಲಾಗಿದೆ.

ಈ ಪ್ರದೇಶದಲ್ಲಿ ಭೂ ಇತಿಹಾಸದ ಎಲ್ಲ ಕಾಲವನ್ನು ಪ್ರತಿನಿಧಿಸುವ ಶಿಲಾಸ್ತೋಮಗಳು ಹೊರಕಂಡಿವೆ :

ಶಿಲಾಸ್ತೋಮದ ಹೆಸರು				ಕಾಲ

1	 2					 3

8  ಮೇಲ್ಮೈಯ್ಯಿಯದು			ಪ್ಲೀಸ್ಪೋಸೀನ್ ಯುಗದಿಂದ ವರ್ತಮಾನ
(ಸೂಪರ್ ಫಿಶಿಯಲ್)			ಕಾಲದ ವರೆಗೆ
7  ಚತುರ್ಥಕ (ಟರ್ಷಿಯರಿ)		ಇಯೋಸೀನ್ ಯುಗದಿಂದ ಪ್ಲಿಯೊಸೀನ್
					ಯುಗದ ವರೆಗೆ
6  ಕ್ರಿಟೇಷಿಯಸ್				ಕ್ರಿಟೇಷಿಯಸ್ ಆದಿ ಭಾಗದಿಂದ ಅಂತ್ಯದ
					ವರೆಗೆ
5  ಕೆರೂ				ಕಾರ್ಬಾನಿಫೆರಸ್ ಅಂತ್ಯದಿಂದ ಜುರಾಸಿಕ್
					ಆದಿ ಕಾಲದ ವರೆಗೆ
4  ಕೇಪ್				ಸೈಲೂರಿಯನ್ ಯುಗದ ಅಂತ್ಯದಿಂದ
					ಕಾರ್ಬಾನಿಫೆರಸ್ ಆದಿಕಾಲದ ವರೆಗೆ
3  ಪೂರ್ವಕೇಪ್				ಡೆಮೋನಿಯನ್ ಕಾಲಕ್ಕಿಂತ ಹಿಂದಿನ 
					ಶಿಲೆಗಳು
2  ಪೂರ್ವ ಕೇಂಬ್ರಿಯನ್			ವಿಟ್‍ವಾಟರ್‍ಸ್ರ್ಯಾಂಡ್, ವೆಂಟ್‍ರ್ಸ್
					ಡಾರ್ಪ್ ಮತ್ತು ಟ್ರಾನ್ಸ್‍ವಾಲ್ ಶಿಲೆಗಳು
1  ಅದಿಮ (ಪ್ರಿಮಿಟಿವ್)			ಆರ್ಷೇಯ ಕಲ್ಪದ ಶಿಲೆಗಳು

ಇವುಗಳ ಮೇಲೆ ಪೂರ್ವ ಕೇಂಬ್ರಿಯನ್ ಅಥವಾ ಆದಿ ಜೀವಕಲ್ಪದ ಶಿಲೆಗಳು ನಿಕ್ಷೇಪವಾಗಿವೆ. ಇವನ್ನು ವಿಟ್‍ವಾಟರ್ ಸ್ರ್ಯಾಂಡ್, ವೆಂಟರ್ಸ್ ಡಾರ್ಪ್ ಮತ್ತು ಟ್ರಾನ್ಸ್‍ವಾಲ್ ಶಿಲಾಸ್ತೋಮಗಳೆಂದು ಮೂರು ಭಾಗಗಳಾಗಿ ವಿಭಜಿಸಲಾಗಿದೆ. ಇವೆಲ್ಲ ಭೂಚಲನೆ ಮತ್ತು ಅಂತಸ್ಸರಣ ಕಾರ್ಯಗಳಿಗೆ ಒಳಗಾಗಿವೆ. ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಲ್ಯಾಪೊಲಿತ್ ಎನಿಸಿದ ಬುಷ್ ವೆಲ್ಡ್ ಕಾಂಪ್ಲೆಕ್ಸ್ ಇವುಗಳಲ್ಲಿಒಂದು. ರ್ಯಾಬಿಡ್ ಮತ್ತು ವಿಟ್‍ವಾಟರ್ ಸ್ರ್ಯಾಂಡ್ ಪ್ರದೇಶ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಚಿನ್ನ ಸಿಕ್ಕುವ ಪ್ರದೇಶ. ಮೊದಲು ಪ್ರಪಂಚದ ಚಿನ್ನದ ಉತ್ಪತ್ತಿಯ ಸಿಂಹಪಾಲು ದಕ್ಷಿಣ ಆಫ್ರಿಕ ಗಣರಾಜ್ಯದ್ದಾಗಿತ್ತು.  ಈಗಲೂ 50% ರಷ್ಟು ಈ ಒಂದು ರಾಜ್ಯದಿಂದಲೇ ಒದಗುತ್ತದೆ.  ಇದರ ಬಹುಭಾಗ ಗರಸು ನಿಕ್ಷೇಪಗಳಲ್ಲಿ ಇದೆ.  ಕಿಂಬರ್ಲಿ ಪ್ರದೇಶದ ಜ್ವಾಲಾ ಮುಖಿಗಳ ಬಿರುಡೆ ಶಿಲೆಗಳು ವಜ್ರಭರಿತವಾಗಿವೆ. ಈ ಶಿಲೆಗಳ ಶಿಥಿಲೀಕರಣದಿಂದ ವಜ್ರಗಳ ಬಿಡುಗಡೆ ಹೊಂದಿ ಪಡೆಂಟೆಶಿಲೆಗಳಲ್ಲಿ ಸೇರುವುದೂ ಉಂಟು.

ಮೇಲೆ ವರ್ಣೀಸಿದ ಪೂರ್ವ ಕೇಂಬ್ರಿಯನ್ ಶಿಲೆಗಳ ಮೇಲೆ ಉತ್ತರ ಕೇಂಬ್ರಿಯನ್ ಶಿಲಾಸ್ತೋಮಗಳಾದ ನಾಮ, ರೂಯ್‍ಬರ್ಗ್ ಮತ್ತು ವಾಟರ್ ಬರ್ಗ್ ನಿಕ್ಷೇಪಗೊಂಡಿವೆ. ಇವುಗಳಲ್ಲಿ ಜೀವ್ಯವಶೇಷಗಳಿಲ್ಲ. ಆದರೂ ಇವು ಪ್ರಾಚೀನ ಜೀವಕಲ್ಪದ ಪೂರ್ವಾರ್ಧವನ್ನು ಪ್ರತಿನಿಧಿಸಬಹುದೆಂದು ಭಾವಿಸಲಾಗಿದೆ. ಇವುಗಳ ಮೇಲಿರುವ ಕೇಪ್ ಶಿಲಾಸ್ತೋಮಗಳಲ್ಲಿ ಜೀವ್ಯವಶೇಷಗಳಿವೆ. ಇವು ಸೈಲೂರಿಯನ್ ಯುಗದ ಅಂತ್ಯಕಾಲದಿಂದ ಕಾರ್ಬಾನಿಫೆರಸ್ ಆದಿಕಾಲದ ವರೆಗಿನ ಕಾಲವನ್ನು ಸೂಚಿಸುತ್ತವೆ.
ಕಾರ್ಬಾನಿಫೆರಸ್ ಯುಗದ ಮಧ್ಯಕಾಲದಲ್ಲಿ ಹರ್ಷಿನಿಯನ್ ಮಹಾಪ್ರಳಯವಾಯಿತು. ಜಗತ್ತಿನ ನೆಲಭಾಗವೆಲ್ಲ ಅಂಗಾರ ಖಂಡ ಮತ್ತು ಗೊಂಡವಾನ ಖಂಡ ಎಂಬ ಎರಡು ಮಹಾಖಂಡಗಳಾಗಿ ಮರುವಿಂಗಡಣೆಗೊಂಡಿತು. ದಕ್ಷಿಣ ಆಫ್ರಿಕ, ದಕ್ಷಿಣ ಅಮೆರಿಕ, ಇಂಡಿಯನ್ ಪರ್ಯಾಯ ದ್ವೀಪ, ಆಸ್ಟ್ರೇಲಿಯ ಮತ್ತು ಅಂಟಾರ್ಕಟಿಕ್‍ಗಳು ಗೊಂಡವಾನ ಖಂಡಗಳ ಭಾಗಗಳು. ಈ ಕಾಲದಲ್ಲಿ ಗೊಂಡವಾನ ಖಂಡದಾದ್ಯಂತ ಎರಡು ಪ್ರಮುಖ ಘಟನೆಗಳು ನಡೆದವು. ವಿಶಾಲವಾದ ಭಾಗಗಳು ಖಂಡಾಂತರ ನೀರ್ಗಲ್ಲು ನದಿಗಳಿಂದ ಆವರಿಸಿದ್ದವು. ಇವುಗಳ ನಿಕ್ಷೇಪಗಳು ಅನೇಕ ಕಡೆ ಸಂಚಯಿಸಿವೆ. ಎರಡನೆಯದಾಗಿ, ಅನೇಕ ಸ್ವರಭಂಗಗಳಾಗಿ ಈ ಖಂಡ ಪರ್ಯಾಯದಿಬ್ಬ ಮತ್ತು ತಗ್ಗುಪ್ರದೇಶಗಳಾದುವು. ಈ ರಾಜ್ಯದ ದಕ್ಷಿಣಾರ್ಧಭಾಗ ತಗ್ಗುಪ್ರದೇಶದಲ್ಲಿ ಉತ್ತರಾರ್ಧ ದಿಬ್ಬವಾಯಿತು. ಅಲ್ಲಿಂದ ನದಿಗಳು ಶಿಥಿಲೀಕರಣದ ಉತ್ಪನ್ನಗಳನ್ನು ಸಾಗಿಸಿ ತಗ್ಗುಪ್ರದೇಶದಲ್ಲಿ ಸಂಚಯಿಸಿದವು.  ಈ ಕಾರ್ಯ ಕಾರ್ಬಾನಿಫೆರಸ್ ಯುಗದ ಅಂತ್ಯದಲ್ಲಿ ಪ್ರಾರಂಭವಾಗಿ, ನಿರಂತರವಾಗಿ ಜುರಾಸಿಕ್ ಯುಗದ ಆದಿಯ ವರೆಗೆ ನಡೆಯಿತು. ಹೀಗೆ ಸಂಚಯಿಸಿದ ನಿಕ್ಷೇಪಗಳಿಗೆ ಕೆರೂಸ್ತೋಮ ಎಂದು ಹೆಸರು. ಇವು ಗಣರಾಜ್ಯದ ಅರ್ಧದಷ್ಟು ವಿಶಾಲ ಭೂಭಾಗದಲ್ಲಿ ಹೊರಕಂಡಿವೆ.  ಕೆರೂಸ್ತೋಮವನ್ನು ಈ ಮುಂದಿನಂತೆ ನಾಲ್ಕು ಭಾಗಗಳಾಗಿ ವರ್ಗೀಕರಿಸಲಾಗಿದೆ.

	ಸ್ಟಾರಂಬರ್ಗ್ ಶ್ರೇಣಿ			ಡ್ರೇಕನ್‍ಬರ್ಗ್ ಜ್ವಾಲಾಮುಖಿ ಶಿಲೆ
	(ಕಾರ್ನಿಕ್ ಕಾಲದಿಂದ			ಗಳು 1400 ಮೀ.
	ಅಯಾಸಿಕ್ ವರೆಗೆ)				ಕೇವ್ ಮರಳು ಶಿಲೆಗಳು 250 ಮೀ.
						ಕೆಂಪು ಪದರುಗಳು 500 ಮೀ.
						ಮಾಲ್ಟೆನೊ ಪದರಗಳು 600 ಮೀ.

	ಬೊಪೋಟ್ ಶಿಲಾಶ್ರೇಣಿ			ಮೇಲ್ಭಾಗ 400 ಮೀ.
	(ಪರ್ಮಿಯನ್ ಅಂತ್ಯದಿಂದ			ಮಧ್ಯಭಾಗ 200 ಮೀ.
	ಲಡಿನಿಕ್)					ಕೆಳಭಾಗ 600 ಮೀ.
	
	ಎಕ್ಕ (ಪರ್ಮಿಯನ್			ಮೇಲ್ಭಾಗ
	ಆದಿಕಾಲ)				ಮಧ್ಯಭಾಗ     1500 ಮೀ.
						ಕೆಳಭಾಗ

	ಡ್ವೈಕ (ಕಾರ್ಬಾನಿಫೆರಸ್			ಜೇಡುಶಿಲೆ ಮತ್ತು ಬಿಳಿಪದರುಗಳು
	ಅಂತ್ಯಕಾಲ)					200 ಮೀ.
						ನೀರ್ಗಲ್ಲು ಗುಂಡು ಪದರುಗಳು 
		  					400 ಮೀ.

ಕೆರೂ ಸ್ತೋಮದ ಶಿಲೆಗಳು ಅತ್ಯಂತ ದಕ್ಷಿಣಭಾಗದಲ್ಲಿ ಹೊರತು ಉಳಿದ ಭಾಗದಲ್ಲಿ ಹೊರತು ಉಳಿದ ಭಾಗಗಳಲ್ಲಿ ಸಮತಲವಾಗಿವೆ. ಇವುಗಳ ಒಟ್ಟು ದಪ್ಪ 25,000 ಅಡಿಗಳು. ಮರಳುಶಿಲೆ ಮತ್ತು ಜೇಡುಶಿಲೆಗಳು ಪ್ರಮುಖವಾದ ಶಿಲೆಗಳು.  ಈ ಸ್ತೋಮವಿರುವ ಕಡೆಗಳಲ್ಲಿ ಬುಟ್ಟೆ ಮತ್ತು ಚೂಪು ತುದಿಯ ಗುಡ್ಡಗಳು ಸಾಮಾನ್ಯವಾಗಿ ಕಂಡುಬರುವ ಮೇಲ್ಮೈ ಲಕ್ಷಣಗಳು.  ಈ ಶಿಲೆಗಳಲ್ಲಿ ನೆಲವಾಸಿ ಸಸ್ಯಗಳ ಅವಶೇಷಗಳು ಹೇರಳವಾಗಿವೆ. ಆದಿಭಾಗದಲ್ಲಿ ಗ್ಲಾಸಾಪ್ಟೆರಿಸ್ ಸಸ್ಯವರ್ಗವೂ ಅಂತ್ಯಭಾಗದಲ್ಲಿ ಟೀಲೊಫಿಲ್ಲಮ್ ಸಸ್ಯವರ್ಗವೂ ಇವೆ. ಅಲ್ಲದೆ ಸರೀಸೃಪಗಳ ಅವಶೇಷಗಳು ಹೇರಳವಾಗಿವೆ. ಮತ್ಸ್ಯಗಳು ಮತ್ತು ಮೃದ್ವಂಗಿಗಳ ಅವಶೇಷಗಳೂ ಇವೆ.

ಡ್ವೈಕ ಶಿಲಾಶ್ರೇಣಿ ಪ್ರಮುಖವಾಗಿ ನೀರ್ಗಲ್ಲು ನಿಕ್ಷೇಪಗಳಿಂದ ಕೂಡಿ ಭಾರತದ ತಾಲ್ಜೀರ್ ಶಿಲಾಶ್ರೇಣಿಯನ್ನು ಹೋಲುತ್ತದೆ. ಇದು ಪ್ರಮುಖವಾಗಿ ಹೊರಕಂಡಿದೆ. ಎಕ್ಕ ಶಿಲಾಶ್ರೇಣಿ ಮುಖ್ಯವಾಗಿ ಮರಳು ಶಿಲೆ, ಜೇಡುಶಿಲೆ ಮತ್ತು ಕಲ್ಲಿದ್ದಲು ಸ್ತರಗಳಿಂದ ಕೂಡಿರುವುದು. ಗಣರಾಜ್ಯದ ಕಲ್ಲಿದ್ದಲು ನಿಕ್ಷೇಪಗಳೆಲ್ಲ ಈ ಶ್ರೇಣಿಗೆ ಸೀಮಿತವಾಗಿವೆ. ಕಲ್ಲಿದ್ದಲಿ ಸ್ತರಗಳ ಸಂಖ್ಯೆ ಕಡಿಮೆಯಾದರೂ ಅವುಗಳ ದಪ್ಪ ಹೆಚ್ಚು ಹಾಗೂ ಅವುಗಳಿಗೆ ವಿಶಾಲವ್ಯಾಪ್ತಿ ಉಂಟು. ಮರಗಿಡಗಳ ಅವಶೇಷಗಳು ಬೆಲೆದ ಭಂಗಿಯಲ್ಲೇ ರಕ್ಷಿತವಾಗಿರುವುದರಿಂದ ಇದು ಅಚಲಿತ ಕಲ್ಲಿದ್ದಲು ಎಂದು ಹೇಳಬಹುದು. ಎ.ಬಿ. ಬೈನ್ ಎಂಬಾತ ಬೋಪರ್ಟ್ ಶ್ರೇಣಿಯಲ್ಲಿ ಅತಿ ಹೇರಳವಾದ ಸರೀಸೃಪಗಳ ಅವಶೇಷಗಳನ್ನು ಪತ್ತೆ ಮಾಡಿ (1856) ಇಡೀ ಜಗತ್ತಿನ ಲಕ್ಷ್ಯವನ್ನು ಇತ್ತ ಸೆಳೆದ.  ಇವುಗಳ ಆಧಾರದ ಮೇಲೆ ಈ ಶಿಲಾಶ್ರೇಣಿಯನ್ನು 1.  ಪೆರಿಯಾಸಾರಸಿನಿಂದ ಕೂಡಿದ ಕೆಳಭಾಗ, 2.  ಡೈಸೈನೊಡಾಂಟದಿಂದ ಕೂಡಿದ ಮಧ್ಯಭಾಗ. 3.  ತೀರೊಡಾಂಟಗಳಿಂದ ಕೂಡಿದ ಮೇಲ್ಭಾಗ ಎಂದು ವಿಭಜಿಸಿದರು.  ಅನಂತರ ಕೆಳಭಾಗದಲ್ಲಿ ಮೂರು, ಮೇಲ್ಭಾದಲ್ಲಿ ಎರಡು ಉಪಭಾಗಗಳನ್ನು ಸ್ಥಾಪಿಸಲಾಗಿದೆ. 1859ರಲ್ಲಿ ವಿಲಿ ಎಂಬಾತ ಕೆರೊಸ್ತೋಮದ ಅತ್ಯಂತ ಮೇಲ್ಬಾಗವನ್ನು ಸ್ಟಾರಂಬರ್ಗ್ ಶ್ರೇಣಿ ಎಂಬ ಹೆಸರಿನಿಂದ ಕರೆದ. ಇದನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ.  ನಾಲ್ಕನೆಯ ಭಾಗ ಬಸಾಲ್ಟ್ ಶಿಲಾಪದರುಗಳಿಂದ ಕೂಡಿದೆ.

ಕೆರೂ ಸ್ತೋಮಗಳಲ್ಲಿ ಅನೇಕ ಡಾಲರೈಟ್ ಡೈಕುಗಳು ಮತ್ತು ಸಿಲ್‍ಗಳು ಅಂತಸ್ಸರಣಗೊಂಡಿವೆ.  ಉತ್ತರದಲ್ಲಿ ಸಿಲ್‍ಗಳು 5,000 ಚದರ ಮೈಲಿಗಳಷ್ಟು ವಿಸ್ತೀರ್ಣ ವ್ಯಾಪಿಸಿದೆ.  ಕೆಲವು ಡೈಕುಗಳು 150-200 ಯ ವರೆಗೆ ಓರೆಯಾಗಿವೆ.  ಲಂಬ ಡೈಕುಗಳೂ ಉಂಟು. ಇವು 6-30 ಅಡಿ ಅಗಲ, 5-20 ಮೈಲು ಉದ್ದ ಇವೆ.

ಇದಾದ ಮೇಲೆ ಅನನುರೂಪ್ಯತೆ ಇದೆ.  ಕೆರೂಸ್ತೋಮದ ಮೇಲೆ ದಕ್ಷಿಣ ಮತ್ತು ಆಗ್ನೇಯ ಭಾಗಗಳಲ್ಲಿ ಕ್ರಿಟೇಷಿಯಸ್ ಸ್ತೋಮಗಳು ಹೊರಕಂಡಿವೆ. ಇವು ಇಡೀ ಕ್ರಿಟೇಷಿಯಸ್ ಯುಗವನ್ನು ಪ್ರತಿನಿಧಿಸುತ್ತವೆ. ದಕ್ಷಿಣ ತೀರದಲ್ಲಿ ತೃತೀಯ ಭೂಕಾಲಯುಗದ ಸಾಗರ ನಿಕ್ಷೇಪಗಳು ಸಾಕಷ್ಟು ಎತ್ತರವುಳ್ಳ ಮೇಲ್ಮೈ ಲಕ್ಷಣಗಳಾಗಿ ಹೊರಕಂಡಿವೆ.
											 (ಡಿ.ಆರ್.)

ಮೇಲ್ಮೈ ಲಕ್ಷಣ :  ದಕ್ಷಿಣ ಆಫ್ರಿಕದ ಬಹುಭಾಗ ಸಮುದ್ರಮಟ್ಟದಿಂದ 3,000 ಅಡಿಗಳಿಗಿಂತ ಎತ್ತರವಾಗಿದೆ.  ಕನಿಷ್ಟ 40% ಭಾಗ 4,000 ಅಡಿಗಳಿಗಿಂತ ಎತ್ತರವಾಗಿದೆ. ಜೊಹಾನೆಸ್‍ಬರ್ಗ್‍ನ ಕೆಲವು ಭಾಗಗಳ ಎತ್ತರ 6,000 ಅಡಿಗಳಿಗಿಂತಲೂ ಹೆಚ್ಚು. ಈ ಪ್ರದೇಶ ಬೋರಲಿಟ್ಟು ತಟ್ಟೆಯಂತಿದೆ. ಪಶ್ಚಿಮದಿಂದ ಪೂರ್ವಕ್ಕೆ ಡ್ರಾಕನ್ಸ್‍ಬರ್ಗ್ ಪರ್ವತದ ಕಡೆಗೆ ಸಾಗಿದಂತೆ ನೆಲ ಕ್ರಮಕ್ರಮವಾಗಿ ಏರುತ್ತದೆ. ಡ್ರಾಕನ್ಸ್‍ಬರ್ಗ್‍ನ ಅತ್ಯುನ್ನತ ಶಿಖರ ಮಾಂಟ್ ಓಸುವರ್ಸ್ (10.822'). ಪಶ್ಚಿಮ ಮತ್ತು ದಕ್ಷಿಣದ ಕಡಲಂಚು 5-50 ಕಿ.ಮೀ. ಅಗಲವಾಗಿದೆ. ಸಮುದ್ರಮಟ್ಟದಿಂದ 500-600 ಅಡಿ ಎತ್ತರವಾಗಿರುವ ಈ ಪ್ರದೇಶ ಬಲು ಫಲವತ್ತಾದ್ದು. ಇಲ್ಲಿ ನಿಂಬೆ ಜಾತಿಯ ಗಿಡಗಳೂ ದ್ರಾಕ್ಷಿಯೂ ಬೆಳೆಯುತ್ತವೆ. ಇದರ ಉತ್ತರಕ್ಕೆ ಲಿಟ್ಸ್ಕರೂ ಮತ್ತು ಗ್ರೇಟ್ ಕೆರೂ ಪ್ರಸ್ಥಭೂಮಿಗಳಿವೆ. ಪರ್ವತಗಳ ನಡುವೆ ಇರುವ ಈ ಪ್ರದೇಶ ಬೆಂಗಾಡು ಅಥವಾ ಅರೆಬೆಂಗಾಡು. ಇದರ ಅಂಚಿನಲ್ಲಿರುವ ಮರಳುಗಾಡು ಕಲಹರಿ ಮರುಭೂಮಿಯೊಂದಿಗೆ ಕೂಡಿಕೊಂಡಿದೆ. ಅರೆಂಜ್ ಫ್ರೀ ಸ್ಟೇಟ್ ಮತ್ತು ಟ್ರಾನ್ಸ್‍ವಾಲ್‍ನ ಪ್ರೇರಿ (ಹುಲ್ಲುಗಾಡು) ಅಥವಾ ವೆಲ್ಡ್ ಪ್ರದೇಶ ಖನಿಜ ನಿಕ್ಷೇಪಗಳಿಂದ ಪ್ರಸಿದ್ಧವಾಗಿದೆ. 

ಡ್ರಾಕನ್ಸ್‍ಬರ್ಗ್‍ನಿಂದ ಹಿಂದೂ ಸಾಗರದ ವರೆಗಿನ ಪ್ರದೇಶ ಬೆಟ್ಟ ಕಣಿವೆಗಳಿಂದ ಕೂಡಿ ಸಮುದ್ರದ ಕಡೆಗೆ ಇಳಿಜಾರಾಗಿದೆ. ನಟಾಲಿನ ಈ ಪ್ರದೇಶ ಸಸ್ಯಸಮೃದ್ಧವಾದ್ದು ; ಕರಾವಳಿಯ ಬಳಿ ಉಷೋಷ್ಣವಲಯದ ಮರಗಿಡಗಳಿವೆ.

ರಾಜ್ಯದ ಪ್ರಮುಖ ನದಿಗಳು ಅರೆಂಜ್ ಮತ್ತು ಲಿಂಪೋಪೋ. ಅರೆಂಜ್ ನದಿ ಅಟ್ಲಾಂಟಿಕ್ ಸಾಗರಕ್ಕೂ ಲಿಂಪೋಪೋ ಹಿಂದೂ ಸಾಗರಕ್ಕೂ ಹರಿಯುತ್ತವೆ.  ವಾಲ್ ಎಂಬುದು ಅರೆಂಜ್‍ನ ಮುಖ್ಯ ಉಪನದಿ.

ವಾಯುಗುಣ : ಟ್ರಾನ್ಸ್‍ವಾಲ್ನ ಉತ್ತರ ಭಾಗ ವಿನಾ ರಾಜ್ಯದ ಉಳಿದ ಭಾಗವೆಲ್ಲ ಸಮಶೀತೋಷ್ಣವಲಯಕ್ಕೆ ಸೇರಿದೆ.  ಉತ್ತರಾರ್ಧಗೋಳದಲ್ಲಿ ಈ ಅಕ್ಷಾಂಶಗಳಿಗೆ ಸೇರಿದ ಪ್ರದೇಶಗಳದಕ್ಕಿಂತ ಇಲ್ಲಿಯ ವಾಯುಗುಣ ಹೆಚ್ಚು ಹಿತಕರ. ಸುತ್ತಲೂ ಹರಡಿರುವ ಸಮುದ್ರ ಇದಕ್ಕೆ ಕಾರಣ. ಪಶ್ಚಿಮತೀರದಲ್ಲಿ  ಉತ್ತರದ ಕೆಲವು ಭಾಗಗಳಿಗಿಂತ ಕೇಪ್ ಟೌನ್ ಪ್ರದೇಶ ಹೆಚ್ಚು ಬೆಚ್ಚಗಿದೆ. ದಕ್ಷಿಣ ಆಫ್ರಿಕದ ಪಶ್ಚಿಮ ತೀರದಲ್ಲಿ ಹರಿಯುವ ಬೆಂಗ್ವೆಲ ಶೀತೋದಕ ಪ್ರವಾಹದಿಂದಾಗಿ ಉತ್ತರದ ಭಾಗಗಳಲ್ಲಿ ಹೆಚ್ಚು ಚಳಿಯಾಗುತ್ತದೆ. ಪೂವಘತೀರದಲ್ಲಿ ವೋಜûಂಬೀಕ್ ಉಷ್ಣೋದಕ ಪ್ರವಾಹ ಹರಿದು ಆ ಪ್ರದೇಶವನ್ನು ಬೆಚ್ಚಗೆ ಇಡುತ್ತದೆ. ಇಡೀ ದಕ್ಷಿಣ ಆಫ್ರಿಕದ ಮಾಧ್ಯ ವಾರ್ಷಿಕ ಉಷ್ಣತೆ 600 ಈ . ಎತ್ತರದ ವೆಲ್ಡ್ ಪ್ರದೇಶದಲ್ಲಿ ಹಗಲು ರಾತ್ರಿಗಳ ಉಷ್ಣತೆಗಳಲ್ಲಿ ತೀವ್ರ ವ್ಯತ್ಯಾಸ ಇರುತ್ತದೆ. ಆದರೆ ಕರಾವಳಿಯ ಬಳಿಯಲ್ಲಿ ಉಷ್ಣತೆಯ ದೈನಿಕ ಏರಿಳಿತಗಳು ಕಡಿಮೆ.  ದೇಶದ ಬಹುಭಾಗದಲ್ಲಿ ಮಳೆ ಬಹಳ ಅನಿಶ್ಚಿತ. ದೀರ್ಘ ಅಭಾವ ಪರಿಸ್ಥಿತಿ ಸಂಭವಿಸುವುದುಂಟು.  ಇದರಿಂದ ಕೃಷಿಕಾರ್ಯ ಅನೇಕ ವೇಳೆ ನಷ್ಟಕರ. ದೇಶದ ವಾರ್ಷಿಕ ಸರಾಸರಿ ಮಳೆ 17.5". ಆದರೆ ಶೇಕಡ 30ರಷ್ಟು ಪ್ರದೇಶದಲ್ಲಿ 10" ಗಿಂತಲೂ ಕಡಿಮೆ. ಸಾಮಾನ್ಯವಾಗಿ ಬೇಸಗೆಯಲ್ಲೇ ಮಳೆಯಾಗುತ್ತದೆ. ಆದರೆ ಪಶ್ಚಿಮ ಕರಾವಳಿಯಲ್ಲಿ ಚಳಿಗಾಲದ ಮಳೆ. ಇದರದು ಮೆಡಿಟರೇನಿಯನ್ ಪ್ರರೂಪಿ ವಾಯುಗುಣ.  ದಕ್ಷಿಣ ಕರಾವಳಿಯಲ್ಲಿ ಕೇಪ್ ಪ್ರದೇಶದಲ್ಲಿ ಎರಡು ಋತುಗಳಲ್ಲೂ ಮಳೆಯಾಗುತ್ತದೆ.

ಸಸ್ಯಪ್ರಾಣಿಜೀವನ : ವಾಯುಗುಣ ಹಾಗೂ ಎತ್ತರದಲ್ಲಿ ವೈವಿಧ್ಯ ಇರುವುದರಿಂದ ಇಲ್ಲಿಯ ಸಸ್ಯಪ್ರಾಣಿಸಂಪತ್ತು ವೈವಿಧ್ಯಮುವಾದ್ದು.  ಪ್ರಪಂಚದಲ್ಲಿರುವ 200 ಸಸ್ಯಕುಟುಂಬಗಳ ಪೈಕಿ 140 ಕುಟುಂಬಗಳ ಸಸ್ಯಗಳು ದಕ್ಷಿಣ ಆಫ್ರಿಕದಲ್ಲಿವೆ.  ಇಲ್ಲಿರುವ ಸಸ್ಯಪ್ರಭೇದಗಳು ಸುಮಾರು 16,000. ಕಳ್ಳಿಯ 200 ಪ್ರಭೇದಗಳೂ ಹುಲ್ಲಿನ 500 ಪ್ರಭೇದಗಳೂ ಉಂಟು.  ಚಿರತೆ, ನರಿ, ಸಿಂಹ, ಅನೆ, ಖಡ್ಗಮೃಗ, ಕಾಡೆಮ್ಮೆ, ನೀರಾನೆ, ನಾನಾ ಬಗೆಯ ಉರಗಗಳು ಬಹುತೇಕ ಎಲ್ಲೆಡೆಗಳಲ್ಲೂ ಈಗಲೂ ಇವೆ.  ಸುಮಾರು 900 ಬಗೆಯ ಹಕ್ಕಿಗಳೂ 200 ಬಗೆಯ ಹಾವುಗಳೂ ಉಂಟು. ಇವಲ್ಲದೆ ಸುಮಾರು 40,000 ಬಗೆಯ ಕೀಟಗಳು 1,000 ಬಗೆಯ ಮೀನುಗಳೂ ಇವೆ. ಮೋಲ್, ತುಪ್ಪಳು ಹೆಗ್ಗಣ, ಮುಳ್ಳುಹಂದಿ, ಮೊಲ, ಅಳಿಲು ಮೊದಲಾದ 150 ಮೂಷಕ ವರ್ಗದ ಪ್ರಾಣಿಗಳಿವೆ.  ಪಕ್ಷಿಗಳಲ್ಲಿ ಪ್ರಮುಖವಾದವು ಸ್ವಲೊ, ಷ್ರೈಕ್, ಕೊಕ್ಕರೆ, ಕ್ರೌಂಚ್, ಗಿಣಿ, ಡೇಗೆ, ಹದ್ದು, ಗೂಬೆ, ಸೆಕ್ರೆಟರಿ ಬರ್ಡ್, ಗಿನಿಕೋಳಿ, ಬಟೇರ, ಉಷ್ಟ್ರಪಕ್ಷಿ ಮತ್ತು ಮೈನ.

ಜನಜೀವನ

ಜನ :  ದಕ್ಷಿಣ ಆಫ್ರಿಕದಲ್ಲಿ ವಿವಿಧ ಬುಡಕಟ್ಟು ಸಂಮಿಶ್ರಣವಿದೆ. ಆಫ್ರಿಕಾನರೆನಿಸಿದ ಮೂಲ ಡಚ್ ಜನರೂ ಫ್ರೆಂಚ, ಹ್ಯೂಗೆನಾಟ್, ಜರ್ಮನ್ ವಲಸೆಗಾರರ ವಂಶೀಯರೂ ಬ್ರಿಟಿಷ್ ವಂಶೀಯರೂ ಬಿಳಿಯರು. ಹಾಟೆಂಟಾಟ್, ಬಿಳಿ ಮತ್ತು ಆಫ್ರಿಕನ್ ರಕ್ತಗಳ ಮಿಶ್ರಣವಾಗಿರುವವರು ವರ್ಣೀಯರು. ಇಲ್ಲಿ ಮಲಯದಿಂದ ಬಂದವರೂ ಭಾರತೀಯ ಸಂಜಾತರೂ ಚೀನೀಯರೂ ಇಂಡೋನೇಷಿಯನರೂ ಇದ್ದಾರೆ. ಸ್ಥಳೀಯ ಆಫ್ರಿಕನರಲ್ಲಿ ಹಲವು ಬುಡಕಟ್ಟುಗಳಿವೆ. ಕ್ಸೋಸ, ಜೂóಲೂ, ದಕ್ಷಿಣ ಸೋತೊ, ಟ್ಸ್ವಾನ, ಉತ್ತರ ಸೋತೊ, ಟ್ಸೋಂಗ, ಸ್ವಾಜಿ, ಸ್ಡೆಬೆಲೆ, ವೆಂಡಿಯಾ-ಇವು ಪ್ರಮುಖ ಗುಂಪುಗಳು. ಇವರೆಲ್ಲ ಕೃಷಿಕರು ಹಾಗೂ ಗೋವಳರು. ಇವರಲ್ಲಿ ಪಿತೃಪ್ರಧಾನ ಕುಟುಂಬ ಪದ್ಧತಿಯಿದೆ. ಪ್ರತಿ ಬಣಕ್ಕೂ ಒಬ್ಬ ನಾಯಕ ಅಥವಾ ದೊರೆ ಇರುತ್ತಾನೆ.  ಅವನು ದೇವತೆಯೆಂಬ ಭಾವನೆ ಜನಗಳಿಗೆ ಇದೆ. ಈ ಜನರಲ್ಲಿ ನಗರವಾಸಿಗಳೂ ಉಂಟು. ನಗರಜೀವಿಗಳಿಗೆ ಹಿಂದಿನ ಬಣ್ಣದ ನಿಷ್ಠೆ ತಪ್ಪಿಹೋಗಿದೆ.

ದಕ್ಷಿಣ ಆಫ್ರಿಕದಲ್ಲಿ ಕರಿಯರನ್ನು ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರತ್ಯೇಕಿಸಿಡುವ ಅಪಾರ್ತೀಡ್ ಪದ್ಧತಿ ಇದೆ.  ಈ ಪದ್ಧತಿಗೆ ಪ್ರಪಂಚಾದ್ಯಮತ ಪ್ರತಿಭಟನೆ ಇದ್ದರೂ ಇದಕ್ಕೆ ಪ್ರಭುತ್ವ ನಡಸುತ್ತಿರುವ ಬಿಳಿಯರ ಬೆಂಬಲವಿದೆ. ಈ ಪದ್ಧತಿಯನ್ನೂ ಮತ್ತೂ ಬಲಪಡಿಸಲು ಕರಿಯ ಜನರ ನೆಲಗಳನ್ನು (ಬಾಂಟೂಸ್ತಾನ್) ಸ್ಥಾಪಿಸಿದ್ದಾರೆ.  ಕರಿಯರಿಗೆ ಅವರ ಸ್ಥಳಗಳಲ್ಲೇ ಕೆಲಸ ದೊರಕಿಸುವ ಪ್ರಯತ್ನಗಳಾಗುತ್ತಿವೆ.  ಬಾಂಟೂ ನಗರಗಳಲ್ಲಿ ಬಾಂಟೂ ಜನರೇ ವಾಸಿಸುವ,  ಉದ್ಯಮ ನಡೆಸುವ ವ್ಯವಸ್ಥೆಯಿದೆ.  ಈ ನೆಲೆಗಳಿಗೆ ಸ್ವಯಮಾಡಳಿತವನ್ನು ನೀಡಲಾಗಿದೆ.
									(ಟಿ.ಇ.ಎಚ್.; ವಿ.ಜಿ.ಕೆ.)

ಜನ ನತ್ತು ಪಟ್ಟಣಗಳು : ದಕ್ಷಿಣ ಆಫ್ರಿಕ ಗಣರಾಜ್ಯದಲ್ಲಿ ಬಿಳಿಯರು; ಬಾಂಟೂ ಜನ; ವರ್ಣೀಯರು ಮತ್ತು ಏಷ್ಯನ್ ಸಂಜಾತರು ಇದ್ದಾರೆ.

ಹೆಚ್ಚು ಜನಸಂಖ್ಯೆ ನಗರಗಳು ಕೇಪ್ ಟೌನ್, ಪ್ರಿಟೋರಿಯ, ಜೋಹಾನ್‍ಸ್‍ಬರ್ಗ್, ಡರ್ಬನ್, ಪೋರ್ಟ ಎಲಿಜûಬತ್,  ಜರ್ಮಿಸ್ಟನ್, ಬನೋನೀ, ಬ್ಲೂಮ್‍ಫಾಂಟೀನ್, ಸ್ಪ್ರಿಂಗ್ಸ್ ಮತ್ತು ಈಸ್ಟ್ ಲಂಡನ್.

ಭಾಷೆ :  ಪ್ರತಿಯೊಂದು ಜನಾಂಗೀಯ ಗುಂಪಿಗೂ ಅದರದೇ ಆದ ಭಾಷೆಯಿದೆ. ಮುಖ್ಯವಾದ ಭಾಷೆಗಳು ಆಫ್ರಿಕಾನ್ಸ್ ಮತ್ತು ಇಂಗ್ಲಿಷ್.  ಆಫ್ರಿಕಾನ್ಸ್ ಭಾಷೆ ಇಲ್ಲಿ 17ನೆಯ ಶತಮಾನದಲ್ಲಿದ್ದ ಡಚ್ ವಲಸೆಗಾರರು ಆಡುತ್ತಿದ್ದ ಭಾಷೆಯ ಪರಿವರ್ತಿತ ರೂಪ.  ಇದರಲ್ಲಿ ಹಲವು ಏಷ್ಯನ್, ಆಫ್ರಿಕನ್ಸ್ ಮತ್ತು ಯೂರೋಪಿಯನ್ ಭಾಷೆಗಳ ಶಬ್ದಗಳೂ ರಚನೆಗಳೂ ಬೆರೆತುಕೊಂಡಿವೆ.  ಇಲ್ಲಿಯ ಬಿಳಿಯ ಜನರಲ್ಲಿ ಅನೇಕರಿಗೆ ಎರಡು ಭಾಷೆಗಳು ಬರುತ್ತವೆ.  ವರ್ಣೀಯರು ಆಫ್ರಿಕಾನ್ಸ್ ಭಾಷೆ ಆಡುತ್ತಾರೆ.  ನಗರ ಪ್ರದೇಶಗಳಲ್ಲಿರುವವರು ದ್ವಿಭಾಷಿಗಳು. ಆಫ್ರಿಕನರು ತಮ್ಮ ಭಾಷೆಗಳನ್ನೇ ಆಡುವವರಾದರೂ ತಮ್ಮ ದಣಿಗಳ ಭಾಷೆಗಳನ್ನು ಕಲಿತಿರುತ್ತಾರೆ.  ಇಂಗ್ಲಿಷ್ ವ್ಯಾಪಕವಾಗಿ ಬಳಕೆಯಲ್ಲಿದೆ.  ಆಫ್ರಿಕನರ ಶಾಲೆಗಳಲ್ಲಿ ಆಫ್ರಿಕಾನ್ಸ್ ಈಗ ಕಡ್ಡಾಯ. ಇದರ ವಿರುದ್ಧ ತೀವ್ರ ಅಸಂತುಷ್ಟಿ ಬೆಳೆದಿದೆ.

ಧರ್ಮ :  ಇಲ್ಲಿಯ ಬಿಳಿಯರು ಯೂರೋಪ್ ದೇಶಗಳಿಂದ ಬಂದು ನೆಲೆಸಿದವರಾದ್ದರಿಂದ  ಇಲ್ಲಿ ಕ್ರೈಸ್ತಮತದ ವಿವಿಧ ಪಂಥಗಳಿಗೆ. ಅವುಗಳಲ್ಲಿ ಡಚ್ ಸುಧಾರಣಾ ಚರ್ಚ್, ಇಂಗ್ಲೆಂಡಿನ ಪ್ರಾಟೆಸ್ಟೆಂಟ್ ಮತ, ಮೆಥಾಡಿಸ್ಟ್ ಹಾಗೂ ಕ್ಯಾಥೋಲಿಕ್ ಪಂಥಗಳು ಪ್ರಮುಖವಾದವು.  ಯಹೂದಿ, ಮುಸ್ಲಿಂ ಹಾಗೂ ಹಿಂದೂ ಧರ್ಮಿಯರು ಅಲ್ಪಸಂಖ್ಯಾರತು.
ಇತಿಹಾಸ

ಪ್ರಾಗಿತಿಹಾಸ :   ಮಾನದ ವಿಕಾಸದ ಅತ್ಯಂತ ಪ್ರಾಚೀನ ಪ್ರದೇಶಗಳಲ್ಲಿ ದಕ್ಷಿಣ ಆಫ್ರಿಕವೂ ಒಂದು ಎಂಬುದು ಅಲ್ಲಿ ದೊರಕಿರುವ ತಲೆಬುರುಡೆ ಫಾಸಿಲ್‍ಗಳಿಂದ ಗೊತ್ತಾಗುತ್ತದೆ.  ಅಲ್ಲಿ ಮಾನವನ ಇತಿಹಾಸವನ್ನು 30,00,000 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯಬಹುದು. ಅದು ಮಾನವನ ಆರಂಭದ ಕಾಲ. ಇದು ಮಾನವನ ವಿಕಾಸದ ಮುಂಚೂಣಿಯ ಪ್ರದೇಶವಾಗಿತ್ತು. ಹಾಮಿನಿಡೀ ಕುಟುಂಬದ ಜೀವಿ ನೆಟ್ಟಗೆ ನಿಂತು ಒಂದು ಗೊತ್ತಾದ ಉದ್ದೇಶಕ್ಕಾಗಿ ಉಪಕರಣಗಳನ್ನು ರೂಪಿಸಬಲ್ಲ. ಮಾನವನೆಂಬ ವ್ಯಾಖ್ಯೆಗೆ ಒಳಪಡುವಂಥ ಪ್ರಾಣಿಯಾಗಿ ವಿಕಾಸಗೊಂಡ ಪ್ರದೇಶಗಳಲ್ಲಿ ಇದೂ ಒಂದು. ಈ ಮಾನವಸದೃಶ್ಯ ಜೀವಿಗಳು ಬಹುಕಾಲ ಸಣ್ಣ ಗುಂಪುಗಳಲ್ಲಿ ಸವಾನ ಪ್ರದೇಶಗಳಲ್ಲಿ ಹಣ್ಣುಗಳೇ ಮುಂತಾದುವನ್ನು ಅರಸುತ್ತ ತಿರುಗುತ್ತಿದ್ದವು. ಬಹುಶಃ ಗೆಡ್ಡೆ ಗೆಣಸುಗಳನ್ನೂ ಅರಸುತ್ತಿದ್ದವು, ಜೊತೆಗೆ ಆಹಾರವಾಗಿ ಬಳಸುವ ಸಣ್ಣಪುಟ್ಟ ವನ್ಯಮೃಗಗಳನ್ನೂ ಹಿಡಿಯುತ್ತಿದ್ದುವು. ಪ್ರಾಚೀನ ಮತ್ತು ಮಧ್ಯ ಶಿಲಾಯುಗದ ವಿವಿಧ ಘಟ್ಟಗಳನ್ನು ಇಲ್ಲಿ ಕಾಣಬಹುದು.  ನವಶಿಲಾಯುಗದ ಗುರುತುಗಳು ಇಲ್ಲಿ ಕಾಣಸಿಗುವುದಿಲ್ಲವಾದರೂ ಕಬ್ಬಿಣಯುಗದ ಕುರುಹುಗಳುಂಟು. ಅಂತೂ ಯೂರೋಪಿಯನರೂ ಬರುವ ವೇಳೆಗೆ ಇಲ್ಲಿ ಎರಡು ಗುಂಪುಗಳ ಜನರಿದ್ದರು: ಪಶ್ಚಿಮ ಮರುಭೂಮಿ-ಪ್ರಸ್ಥಭೂಮಿ ಪ್ರದೇಶದ ಆದಿಮ ಅಲೆಮಾರಿ ಬೇಟೆಗಾರರಾದ ಪೊದೆ ಜನರು ಮತ್ತು ದಕ್ಷಿಣ ಮತ್ತು ಪೂರ್ವ ಕರಾವಳಿಯಲ್ಲಿದ್ದ ದನಗಾಹಿಗಳಾದ ಹಾಟೆನ್‍ಟಾಟರು.  ಸುಮಾರು ಅದೇ ಕಾಲದಲ್ಲಿ ಉತ್ತರದಿಂದ ಬಾಂಟೂ ಭಾಷೆ ಅಡುವ ಜನ ಅಲ್ಲಿಗೆ ಬಂದು ಉತ್ತರ ಮತ್ತು ಪೂರ್ವ ಪ್ರದೇಶಗಳನ್ನು ಅಕ್ರಮಿಸಿಕೊಳ್ಳುತ್ತಿದ್ದರು.

ಇತಿಹಾಸ : 1488ರಲ್ಲಿ ಪೋರ್ಚುಗೀಸ್ ನಾವಿಕ ಬಾರ್ತೊಲೊಮ್ಯೊಡೀಯಷ್ ದಕ್ಷಿಣ ಆಪ್ರಿಕದ ಗುಡ್ ಹೋಪ್ ಭೂಶಿಖರವನ್ನು ಕಂಡ. ನಟಾಲನ್ನು ವ್ಯಾಸ್ಕೋ ಡ ಗ್ಯಾಮ ಕಂಡದ್ದು 1497ರಲ್ಲಿ. 1652ರಲ್ಲಿ ಡಚ್ ಈಸ್ಟ್ ಇಂಡಿಯ ಕಂಪನಿ ಗುಡ್ ಹೋಪ್ ಭೂಶೀಖರವನ್ನು ಆಕ್ರಮಿಸಿ 1814ರ ವರೆಗೆ ಅದನ್ನು ತನ್ನ ವಶದಲ್ಲಿರಿಸಿಕೊಂಡಿತ್ತು. 1814ರಲ್ಲಿ ಅದನ್ನು ಬ್ರಿಟಿಷರು ಸ್ವಾಧೀನ ಪಡಿಸಿಕೊಂಡು 1824ರಲ್ಲಿ ನಟಾಲ್ ಭಾಗದಲ್ಲೂ ನೆಲೆಸಿದರು. 1836ರ ಹೊತ್ತಿಗೆ ಇಂಗ್ಲಿಷ್ ಪ್ರಾಬಲ್ಯ ಈ ಭಾಗದಲ್ಲಿ ಹೆಚ್ಚಿತು. ಇವರಿಗಿಂತ ಮೊದಲು ಇಲ್ಲಿ ನೆಲೆಸಿದ್ದ ಡಚ್ಚರು ಗುಂಪುಗುಂಪಾಗಿ ಟ್ರಾನ್ಸ್‍ವಾಲ್ ಮತ್ತು ಅರೆಂಜ್ ಫ್ರೀ ಸ್ಟೇಟ್ ಪ್ರದೇಶಗಳಿಗೆ ಹೋಗಿ ಅಲ್ಲಿ ರಾಜ್ಯವನ್ನು ಸ್ಥಾಪಿಸಿಕೊಂಡರು. ಉತ್ತರ ನಟಾಲ್‍ನಲ್ಲೂ ನೆಲೆಸಿದರು. ಆದರೆ 1844ರ ಹೊತ್ತಿಗೆ ಅದು ಬ್ರಿಟಿಷರ ಕೇಪ್ ಕಾಲೋನಿಗೆ  ಸೇರಿಹೋಯಿತು. 1856ರಲ್ಲಿ ಅದು ಪ್ರತ್ಯೇಕವಾಯಿತು.

ಕೇಪ್ ಕಾಲೊನಿಯಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪಿಸಲು 1871ರಲ್ಲಿ ಇಂಗ್ಲೆಂಡಿನ ಸರ್ಕಾರದ ವಸಾಹತುಗಳ ಕಾರ್ಯದರ್ಶಿ ಲಾರ್ಡ್ ಕಾರ್ನರ್ ವಾನ್ ಪ್ರಯತ್ನಿಸಿದ. ಆದರೆ ಆ ವೇಳೆಗೆ ಕಿಂಬರ್ಲಿ ಮತ್ತು ಕೇಪ್ ಕಾಲೋನಿಯಲ್ಲಿ ವಜ್ರವೂ ಟ್ರಾನ್ಸ್‍ವಾಲ್‍ನಲ್ಲಿ ಚಿನ್ನವೂ ಸಿಕ್ಕ, ಜನ ಅಲ್ಲಿಗೆ ಹೆಚ್ಚು ಸಂಖ್ಯೆಯಲ್ಲಿ  ಹೋಗಲಾರಂಭಿಸಿದರು. ಬ್ರಿಟಿಷ್‍ರಿಗೂ ಡಚ್ಚರಿಗೂ ನಡುವೆ ಘರ್ಷಣೆಗಳಾದುವು.

ಬ್ರಿಟಿಷ್ ವಸಾಹತುಗಳನ್ನು ಹಾಗೂ ಡಚ್ ಗಣರಾಜ್ಯಗಳನ್ನು ಕೂಡಿಸಿ ಒಕ್ಕೂಟ ಸ್ಥಾಪಿಸುವ ಪ್ರಯತ್ನ ವಿಫಲಗೊಮಡಿತು.  ಬ್ರಿಟಿಷರು 1877-81ರಲ್ಲಿ ಅರಾನ್ಸ್‍ವಾಲನ್ನು ಆಕ್ರಮಿಸಿಕೊಳ್ಳಲು ಮುಂದಾದರು;  ಆದರೆ 1881ರಲ್ಲಿ ಬೋಯರ್ ಜನ (ಅಲ್ಲಿ ನೆಲೆಸಿದ್ದ ಡಚ್ಚರು) ಅವರನ್ನು ಮಜುಬ ಹಿಲ್ ಎಂಬಲ್ಲಿ ಸೋಲಿಸಿದರು. ಅದೇ ವರ್ಷ ಮಾಡಿಕೊಂಡ ಕೌಲಿನ ಪ್ರಕಾರ ಡಚ್ಚರ ಟ್ರಾನ್ಸ್‍ವಾಲ್ ಸ್ವಯಮಾಡಳಿತವನ್ನು ಬ್ರಿಟಿಷರು ಅಂಗೀಕರಿಸಿದರು. ಈ ಜಯದಿಂದ ಉತ್ತೇಜಿತರಾದ ಬೋಯರ್ ಜನ ದಕ್ಷಿಣ ಆಫ್ರಿಕದಲ್ಲಿ ತಮ್ಮ ಪರಮಾದಿಕಾರವನ್ನು ಸ್ಥಾಪಿಸಲು ಬ್ರಿಟಿಷರ ವಿರುದ್ಧ ನಿಂತರು. 1885ರಲ್ಲಿ ಟ್ರಾನ್ಸ್‍ವಾಲ್‍ನ ಅಧ್ಯಕ್ಷನಾಗಿ ಚುನಾಯಿತನಾದ ಪಾಲ್ ಕ್ರೂಜûರ್ ಬ್ರಿಟಿಷ್‍ರಿಗೆ ಹಾಗೂ ಡಚ್ಚೇತರ ಬಿಳಿಯರಿಗೆ ಚುನಾವಣೆ ಮತ್ತು ನಾಗರಿಕ ಹಕ್ಕುಗಳನ್ನು ತಪ್ಪಿಸಿದ. ಸಿಸಿಲ್ ರೋಡ್ಸ್‍ನ ಪ್ರಭಾವದಿಂದ ಟ್ರಾನ್ಸ್‍ವಾಲ್‍ನಲ್ಲಿ ಕ್ರೂಜûರನ ವಿರುದ್ಧ ಸಾಮ್ರಾಜ್ಯ ಶಾಹಿ ಪಕ್ಷವೊಂದು ಸೃಷ್ಟಿಯಾಯಿತು. ಎಲ್ಲ ಬಿಳಿಯ ಜನಾಂಗಗಳೀಗೂ ಸಮಾನ ಹಕ್ಕುಗಳನ್ನು ದೊರಕಿಸಿಕೊಡುವುದರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ವಿಫಲಗೊಂಡಿತು. ಇಂಗ್ಲಿಷರೂ ಸೇರಿದಂತೆ ಡಚ್ಚೇತರ ಬಿಳಿಯರು ಜೇಮ್ಸ್‍ನ ಎಂಬಾತನ ನಾಯಕತ್ವದಲ್ಲಿ ದಂಗೆಯೆದ್ದು ಸೋತರು.  ಡಚ್ಚರಿಗೂ ಇಂಗ್ಲಿಷರಿಗೂ ದ್ವೇಷ ಮತ್ತಷ್ಟು ಹೆಚ್ಚಿತು. ಕ್ರೂಜûರ್ ಬೋಯರ್ ಜನರನ್ನು ಬಲಪಡಿಸಲು ಟ್ರಾನ್ಸ್‍ವಾಲ್ ಮತ್ತು ಅರೆಂಜ್ ಫ್ರೀ ಸ್ಠೆಟ್ ಎರಡನ್ನೂ ಕೂಡಿಸಿ ಡಚ್ ಒಕ್ಕೂಟ ಗಣರಾಜ್ಯವನ್ನು ಸ್ಥಾಪಿಸಲು ಮುಂದಾದ (1897). ಅದೇ ವರ್ಷ ಇಂಗ್ಲೆಂಡಿನಿಂದ ಸರ್ ಆಲ್ಫ್ರೆಡ್ ಮಿಲ್ನರ್ ಹೈ ಕಮಿಷನರನಾಗಿ ನೆಮಕಗೊಂಡು ಬಂದ. ಇವನ ಕಾಲದಲ್ಲಿ ಎಡ್ಗರ್ ಎಂಬ ಇಂಗ್ಲಿಷನನ್ನು ಬೋಯರ್ ಪೋಲಿಸನೊಬ್ಬ ಕೊಲೆ ಮಾಡಿದ್ದರಿಂದ ಪರಿಸ್ಥಿತಿ ಹದಗೆಟ್ಟು ಬ್ರಿಟಿಷ್ ಮತ್ತು ಡಚ್ಚರ ನಡುವೆ ಬೋಯರ್ ಯುದ್ಧ ಪ್ರಾರಂಭವಾಗಿ 3 ವರ್ಷ ನಡೆಯಿತು. (1899-1902). 1899ರಲ್ಲಿ ಬೋಯರ್ ಸೈನ್ಯ ನಟಲ್ ಪ್ರಾಂತ್ಯದೊಳಕ್ಕೆ ನುಗ್ಗಿತು.  ಪ್ರಾರಂಭದಲ್ಲಿ ಬ್ರಿಟಿಷರಿಗೆ ಭಾರಿ ಸೋಲುಗಳಾದವು.  ಆದರೆ ಅನಂತರ ಅವರ ಕೈ ಮೇಲಾಯಿತು.  1900ರಲ್ಲಿ ಬೋಯರ್ ಸೇನಾನಿ ಕಾರಿಕ್ರೋಂಜೆ, ಬ್ರಿಟಿಷ್ ಸೇನಾನಿ ಲಾರ್ಡ್ ರಾಬಟ್ರ್ಸ್‍ನಿಗೆ ಶರಣಾಗತನಾದ. ಬ್ರಿಟಿಷರು ಬ್ಲೂಮ್‍ಫಾಂಟೇನ್, ಜೋಹಾನಸ್‍ಬರ್ಗ್ ಮತ್ತು ಪ್ರಿಟೋರಿಯ ನಗರಗಳನ್ನು ವಶಪಡಿಸಿಕೊಂಡರು. ದೀರ್ಘ ಕದನಗಳ ತರುವಾಯ ಕಿಂಬರ್ಲಿ, ಲೇಡಿಸ್ಮತ್ ಮತ್ತು ಮಫೆಕಿಂಗ್ ನಗರಗಳೂ ಬ್ರಿಟಿಷರ ವಶವಾದವು. 1902ರ ಹೊತ್ತಿಗೆ ಬೋಯರ್ ಜನ ಪೂರ್ಣವಾಗಿ ಸೋತುಹೋದರು.

ಬೋಯರ್ ಯುದ್ಧದಿಂದ ಡಚ್ಚರ ಟ್ರಾನ್ಸ್‍ವಾಲ್ ಮತ್ತು ಅರೆಂಜ್ ಫ್ರೀ ಸ್ಟೇಟ್ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿದುವು.  1910ರಲ್ಲಿ ಬ್ರಿಟಿಷ್ ಗುಡ್ ಹೋಪ್ ಭೂಶಿಖರ ಪ್ರಾಂತ್ಯ, ನಟಾಲ್, ಅರೆಂಜ್ ಫ್ರೀ ಸ್ಟೇಟ್ ಮತ್ತು ಟ್ರಾನ್ಸ್‍ವಲ್-ಇವುಗಳನ್ನು ಸೇರಿಸಿ ದಕ್ಷಿಣ ಆಫ್ರಿಕ ಒಕ್ಕೂಟವನ್ನು ಸ್ಥಾಪಿಸಿದರು. ಒಕ್ಕೂಟದ ಪ್ರಧಾನಿ ಬೋಥಾ ಸಾಮ್ರಾಜ್ಯ ನೀತಿಯನ್ನನುಸರಿಸಿದ; ನ್ಯಾಯಾಂಗ ಮಂತ್ರಿ ಹೆರ್ಟ್eóÁಗ್ ಆಫ್ರಿಕಾನರ್ ರಾಷ್ಟ್ರೀಯತೆಗೆ ನಿಂತ.  ಇದರಿಂದ ಸಂಪುಟದಲ್ಲಿ ಬಿರುಕುಂಟಾಯಿತು.  ಭೋಥಾ ರಾಜಿನಾಮೆ ಕೊಟ್ಟು 1912ರಲ್ಲಿ ಹೊಸ ಮಂತ್ರಿ ಮಂಡಲ ರಚಿಸಿದ. ಅದರಲ್ಲಿ ಹೆರ್ಟ್‍ಜಾóಗ್ ಇರಲಿಲ್ಲ.  ಬೋಥಾ ಯೂರೋಪಿಯನೇತರರಿಗೆ ಗಣಿಗಳಲ್ಲಿ ಕೆಲಸ ನಿಲ್ಲಿಸಿದ; ಕರಿಯರು ಬಿಳಿಯರ ಪ್ರದೇಶಗಳಲ್ಲೂ ಬಿಳಿಯರು ಕರಿಯರ ಜನರ ಪ್ರದೇಶಗಳಲ್ಲೂ ಭೂಮಿ ಪಡೆಯುವುದನ್ನು ನಿಷೇಧಿಸಿದ. ಈ ಮಧ್ಯೆ ಭಾರತೀಯ ಸಂಜಾತರ ಹಕ್ಕುಭಾದ್ಯತೆಗಳಿಗಾಗಿ ಗಾಂಧಿಯವರ ನೇತೃತ್ವದಲ್ಲಿ ಸತ್ಯಾಗ್ರಹ ನಡೆಯಿತು.  ಗಾಂಧಿಯವರ ಸತ್ಯಾಗ್ರಹ ಮೊದಲ ಯಶಸ್ವೀ ಪ್ರಯೋಗ ನಡೆದದ್ದು ದಕ್ಷಿಣ ಆಫ್ರಿಕದಲ್ಲಿ.

ಒಂದನೆಯ ಮಹಾಯುದ್ಧ ಪ್ರಾರಂಭವಾದ ಮೇಲೆ (1914) ದಕ್ಷಿಣ ಆಫ್ರಿಕ ಒಕ್ಕೂಟದ ಜನಾಂಗ ವೈಮನಸ್ಯಗಳು ಮತ್ತಷ್ಟು ಉಲ್ಬಣಗೊಂಡುವು.  ಯುದ್ಧದಲ್ಲಿ ದಕ್ಷಿಣ ಆಫ್ರಿಕ ಒಕ್ಕೂಟ ಭಾಗವಹಿಸುವುದನ್ನು ಪ್ರತಿಭಟಿಸಿ ಎದ್ದ ಬೋಯರ್ ಮತ್ತು ಆಫ್ರಿಕಾನರ್ಸ್ ಜನರ ದಂಗೆಯನ್ನು ಸರ್ಕಾರ ಅಡಗಿಸಿತು.  ಜರ್ಮನ್ ನೈಋತ್ಯ ಆಫ್ರಿಕವನ್ನು ದಕ್ಷಿಣ ಆಫ್ರಿಕನ್ ಪಡೆಗಳು ಆಕ್ರಮಿಸಿದುವು.  1915ರ ಜುಲೈ 9 ರಂದು 4,000 ಜರ್ಮನರು ಟ್ಯುಮೆಬ್ ಬಳಿ ಶರಣಾಗತರಾದರು.
ಒಂದನೆಯ ಮತ್ತು ಎರಡನೆಯ ಮಹಾಯುದ್ಧಗಳ ನಡುವಣ ಕಾಲದಲ್ಲಿ ಗಣಿಗಾರಿಕೆ ಮತ್ತು ಕೈಗಾರಿಕೆ ಅಭಿವೃದ್ಧಿ ಹೊಂದಿದುವು. ಎರಡನೆಯ ಮಹಾಯುದ್ಧದಲ್ಲಿ ದಕ್ಷಿಣ ಆಫ್ರಿಕ ಭಾಗವಹಿಸುವುದನ್ನು ಅನೇಕ ರಾಷ್ಟ್ರೀಯ ಆಫ್ರಿಕಾನರು ವಿರೋದಿಸಿದರಾದರೂ ಅದು ಯುದ್ಧದಲ್ಲಿ ಪಾಲ್ಗೊಂಡಿತ್ತು. 1948ರಲ್ಲಿ ರಾಷ್ಟ್ರೀಯ ಆಫ್ರಿಕಾನರ ರಾಜಕೀಯ ಪಕ್ಷ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂತು. ಅಂದಿನಿಂದ ಆ ಪಕ್ಷಕ್ಕೆ ಅಧಿಕಾರ ಮುಂದುವರಿದಿದೆ. ಅಪಾರ್ತೀಡ್ ನೀತಿಯನ್ನು ವಿಧೇಯಕದ ಮೂಲಕ ಜಾರಿಗೆ ಕೊಟ್ಟು ವರ್ಣದ್ವೇಷವನ್ನು ಮುಂದುವರಿಸುತ್ತಿದೆ. ಬಾಂಟೂ ಜನರಿಗೆ ಪ್ರತ್ಯೇಕ ಪೌರ ಮತ್ತು ಗ್ರಾಮಾಂತರ ಆಡಳಿತಗಳು ಏರ್ಪಟ್ಟಿವೆ. ಬಾಂಟೂಸ್ತಾನದ ಶಾಸನಮಂಡಲಿಗೆ ಪ್ರಪ್ರಥಮ ಚುನಾವಣೆ 1963ರಲ್ಲಿ ನಡೆಯಿತು.  ವಿವಿಧ ಬಣಗಳಿಗೆ ತಂಡಪ್ರದೇಶಗಳು ಏರ್ಪಟ್ಟಿವೆ; ಬಿಳಿಯರ ಮತ್ತು ಕರಿಯರ ನಡುವೆ ವಿವಾಹವನ್ನು ನಿಷೇಧಿಸಲಾಗಿದೆ. ಅವರ ಬಗ್ಗೆ ಪ್ರತ್ಯೇಕ ಮತದಾರ ಪಟ್ಟಿಗಳು ರಚನೆಯಾಗಿವೆ.

1961ರಲ್ಲಿ ಲಂಡನ್ನಿನಲ್ಲಿ ನಡೆದ ಕಾಮನ್‍ವೆಲ್ತ್ ಪ್ರಧಾನಿಗಳ ಸಮ್ಮೆಳನದಲ್ಲಿ ಅಪಾರ್ತೀಡ್ ನೀತಿ ಉಗ್ರ ಟೀಕೆಗೆ ಒಳಗಾಯಿತು. ಕಾಮನ್‍ವೆಲ್ತ್‍ನಿಂದ ದಕ್ಷಿಣ ಆಫ್ರಿಕ ಹೊರಬಂತು (ಮಾರ್ಚ್ 31,1961).  ವರ್ಣಭೇಧ ನೀತಿ ಗಣರಾಜ್ಯದಲ್ಲೂ ಮುಂದುವರಿಯಿತು. ಅಲ್ಲಿನ ಪ್ರಧಾನಿ ವೆರ್‍ಮೊರ್ಡ್ 1966ರ ಸೆಪ್ಟೆಂಬರ್ 13 ರಂದು ಕೊಲೆಯಾದ. ಅವನ ತರುವಾಯ ಬಿ.ಜಿ.ವೊರ್‍ಸ್ಟರ್ ಪ್ರಧಾನ ಮಂತ್ರಿಯಾದ.		
									  										(ವಿ.ಜಿ.ಕೆ.)

ಸಂವಿಧಾನ ಮತ್ತು ಆಡಳಿತ

ಸಂವಿಧಾನ :  1961ರಲ್ಲಿ ಜಾರಿಗೆ ಬಂದ ಸಂವಿಧಾನದ ಪ್ರಕಾರ ಗಣರಾಜ್ಯದಲ್ಲಿ ಸಂಸದೀಯ ಪ್ರಜಾಪ್ರಭುತ್ವವಿದೆ.  ಹೌಸ್ ಆಫ್ ಅಸೆಂಬ್ಲಿ ಮತ್ತು ಸೆನೆಟ್ ಎಂಬ ಎರಡು ಸದನಗಳಿವೆ.  ಕೆಳ ಸದನವಾದ ಅಸೆಂಬ್ಲಿಯ ಸದಸ್ಯಸಂಖ್ಯೆ 166.  ಇದರಲ್ಲಿ ನೈಋತ್ಯ ಆಫ್ರಿಕದ (ನಮಿಬಿಯ) 6 ಪ್ರತಿನಿಧಿಗಳೂ ಸೇರಿದ್ದಾರೆ.  ಸೆನೆಟ್‍ನಲ್ಲಿ 54 ಸದಸ್ಯರು ; ಇವರಲ್ಲಿ ಗಣರಾಜ್ಯದ ನಾಲ್ಕು ಪ್ರಾಂತ್ಯಗಳ ಸದಸ್ಯರೂ ಕೇಪ್‍ಪ್ರಾಂತ್ಯದ ಕರಿಯ ಜನರ ಒಬ್ಬ ಪ್ರತಿನಿಧಿಯೂ ಇದ್ದರೆ. ಉಭಯ ಸದನಗಳ ಸದಸ್ಯರು ಬಿಳಿಯರಾಗಿರಬೇಕು. ವರ್ಷದಲ್ಲಿ ಕೊನೆಯ ಪಕ್ಷ ಒಂದು ಸಲವಾದರೂ ಸಂಸತ್ತಿನ ಅಧಿವೇಶನ ಸೇರಬೇಕು. 1969ರಲ್ಲಿ ಕರಿಯ ಜನರ ಪ್ರಜಾಪ್ರತಿನಿಧಿ ಪರಿಷತ್ತು ಸ್ಥಾಪಿತವಾಯಿತು.

ಅಧ್ಯಕ್ಷನೇ ಗಣರಾಜ್ಯಮುಖ್ಯ.  ಕಜಾರ್ಯಾಧಿಕಾರ ಈತನಲ್ಲಿ ನಿಹಿತವಾಗಿದೆ. ಉಚ್ಚ ನ್ಯಾಯಾಧೀಶನ ಅಧ್ಯಕ್ಷತೆಯಲ್ಲಿ ನಡೆಯುವ ಸಂಸತ್ತಿನ  ವಿಶೇಷ ಸಭೆಯಿಂದ ಈತನ ಆಯ್ಕೆಯಾಗುತ್ತದೆ. ಅಧ್ಯಕ್ಷನಿಂದ ನೇಮಕವಾದ ಸಂಪುಟ ಆಡಳಿತ ನಡೆಸುತ್ತದೆ. ಪ್ರಧಾನ ಮಂತ್ರಿ ಸಂಪುಟದ ನಾಯಕನಾಗಿರುತ್ತಾನೆ. ಸಂಪುಟದ ಸದಸ್ಯರ ಸಂಖ್ಯೆ 18 ಕ್ಕೆ ಮೀರಿರಬಾದರು.  ಸಂಸತ್ತಿನ ಮೂಲಕ ಮಂತ್ರಿಗಳ ಚುನಾವಣೆಯಾಗುತ್ತದೆ.

ಆಡಳಿತ :  1994ರಲ್ಲಿ ದಕ್ಷಿಣ ಆಫ್ರಿಕ ಗಣರಾಜ್ಯವನ್ನು ಈ ಕೆಳಗೆ ತೋರಿಸಿರುವಂತೆ ಒಂಬತ್ತು ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಯಿತು.

ಪ್ರಾಂತ್ಯಗಳು
ಆಡಳಿತಕೇಂದ್ರ
ವಿಸ್ತೀರ್ಣ ಚ.ಕಿಮೀ.
ಜನಸಂಖ್ಯೆ (2001)

1. ಪೂರ್ವ ಕೇಪ್ ಪ್ರಾಂತ್ಯ
ಬಿಸೊ
1,69,580
64,36,761

2. ಫ್ರೀಸ್ಟೇಟ್ -
ಬ್ಲೂಮ್‍ಫಾಂಟೇನ್
1,29,480
27,06,776

3. ಗೌಟೆಂಗ್ -
ಜೋಹಾನ್ಸ್‍ಬರ್ಗ್
17,010
88,37,172

4. ಕ್ವಜುóಲು ನಟಾಲ್ -
ಪೀಟರ್‍ಮಾರಿಟ್ಜ್‍ಬರ್ಗ್
92,100
94,26,018

5. ಪುಮಲಂಗ -
ನೆಲ್ಸ್‍ಪ್ರೂಯಿಟ್
79,490
31,22,994

6. ಲಿಂಪೊಪೊ -
ಪೊಲಕ್ವನೆ
1,23,900
52,73,637

7. ಉತ್ತರ ಕೇಪ್ ಪ್ರಾಂತ್ಯ
ಕಿಂಬರ್ಲಿ
3,61,830
8,22,726

8. ವಾಯುವ್ಯ ಪ್ರಾಂತ್ಯ
ಮಫಿಕೆಂಗ್
1,16,320
36,69,349

9. ಪಶ್ಚಿಮ ಕೇಪ್ ಪ್ರಾಂತ್ಯ
ಕೇಪ್‍ಟೌನ್
1,29,370
45,24,335

ಪ್ರತಿ ಪ್ರಾಂತ್ಯದ ಅಧಿಕಾರಿಯೂ ಅಧ್ಯಕ್ಷನಿಂದ ನೇಮಕಗೊಳ್ಳುತ್ತಾನೆ. ಪ್ರತಿ ಪ್ರಾಂತ್ಯಕ್ಕೂ ಏಕಸದನದ ಪ್ರಾಮತಿಯ ಪರಿಷತ್ತು ಇದೆ. ಪರಿಷತ್ತಿನ ಸದಸ್ಯರೆಲ್ಲ ಚುನಾಯಿತರು.								 									(ಎ.ಎಂ.ಆರ್.; ಎಸ್.ಎಲ್.ಎನ್.)

ನ್ಯಾಯವ್ಯವಸ್ಥೆ :  ದಕ್ಷಿಣ ಆಫ್ರಿಕದಲ್ಲಿ ಏಕೀಕೃತ ನ್ಯಾಯಿಕ ವ್ಯಸ್ಥೆಯಿದೆ.  ಪರಮೋಚ್ಚ ನ್ಯಾಯಾಲಯದಲ್ಲಿ ಪರಮೋಚ್ಚ ಅಪೀಲು ವಿಭಾಗವಿದೆ. ಮೂಲ ಹಾಗೂ ಅಪೀಲು ಕ್ಷೇತ್ರಾಧಿಕಾರವುಳ್ಳ ಪ್ರಾಂತಿಯ ವಿಭಾಗಗಳೂ ಇವೆ. ಬ್ಲೂಮ್‍ಫಾಂಟೇನ್ ನಗರ ನ್ಯಾಯಾಡಳಿತ ಕೇಂದ್ರ. ಅಲ್ಲಿ ಅಪೀಲು ನ್ಯಾಯಾಲಯವಿದೆ. ನ್ಯಾಯಿಕ ಮಂತ್ರಿಯ ಸಲಹೆಯ ಮೇರೆಗೆ ನ್ಯಾಯಮೂರ್ತಿಗಳನ್ನು ರಾಷ್ಟ್ರಾಧ್ಯಕ್ಷ ನೇಮಕ ಮಾಡುತ್ತಾನೆ. ಅವರನ್ನು ಸಂಸತ್ತು ದುರ್ನಡತೆ ಅಥವಾ ಅಸಾಮಥ್ರ್ಯಕ್ಕಾಗಿ ಮಾತ್ರ ವಜ ಮಾಡಬಹುದು.  ಅವರ ನಿವೃತ್ತಿ ವಯಸ್ಸು 70.

ದಕ್ಷಿಣ ಆಫ್ರಿಕದ ಸಾಮಾನ್ಯ ನ್ಯಾಯ ರೋಮನ್-ಡಚ್ ನ್ಯಾಯ. ಬ್ರಿಟನ್ನಿಗೆ ಗುಡ್ ಹೋಪ್ ಭೂಶಿಖರ ಪ್ರದೇಶ ಸೇರಿದಾದ ಅಲ್ಲಿದ್ದ ಅಕ್ರೋಡೀಕೃತ ನ್ಯಾಯದಿಂದ ಇದು ವಿಕಾಸಗೊಂಡಿದ್ದು, ಸಿವಿಲ್ ಮತ್ತು ಕ್ರಿಮಿನಲ್ ಪ್ರಕ್ರಿಯೆಗಳಲ್ಲಿ ಇದು ಇಂಗ್ಲಿಷ್ ಸಾಮಾನ್ಯ ನ್ಯಾಯದಿಂದ ಬಹಳಮಟ್ಟಿಗೆ ಪ್ರಭಾವಿತವಾಗಿದೆ.

ವ್ಯಾಖ್ಯಿತ ಪ್ರದೇಶಗಳಲ್ಲಿ ಬಾಂಟೂ ವ್ಯವಹಾರಗಳ ಕಮಿಷನರುಗಳ ನ್ಯಾಯಾಲಯಗಳು ಆಫ್ರಿಕನರಿಗೆ ಮಾತ್ರ ಸಂಬಂಧಿಸಿದ ಮೊಕದ್ದಮೆ ವಿಚಾರಣೆ ನಡಸುತ್ತವೆ.  ಫ್ರಿಕನ್ ಬಣ ನಾಯಕರು ತಮ್ಮ ಸಾಂಪ್ರದಾಯಿಕ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳ ವಿಚಾರಣೆ ನಡಸುವ ಪರಿಮಿತ ಅಧಿಕಾರ ಪಡೆದಿದ್ದಾರೆ. ಆಫ್ರಿಕನರಿಗೆ ಅನ್ವಯಿಸುವಂತೆ ಅಪೀಲು ನ್ಯಾಯಾಲಯಗಳೂ ವಿವಾಹವಿಚ್ಛೇದ ನ್ಯಾಯಲಯಗಳೂ ಇವೆ.						(ವಿ.ಜಿ.ಕೆ.)

ಶಿಕ್ಷಣ :  ಅಂತರಾಷ್ಟ್ರೀಯ ತಿಳುವಳಿಕೆಗೂ ಜನಾಂಗ ಸಹಿಷ್ಣುತೆಗೂ ಪ್ರಾಧಾನ್ಯವಿರುವ ಆಧುನಿಕ ಪ್ರಪಂಚದಲ್ಲಿ ತದ್ವಿರುದ್ದ ನೀತಿಯನ್ನು ಅನುಸರಿಸುತ್ತಿರುವ ಕೆಲವು ರಾಷ್ಟ್ರಗಳು ಉಳಿದುಕೊಂಡೇ ಇವೆ.  ಅವುಗಳಲ್ಲಿ ದಕ್ಷಿಣ ಆಫ್ರಿಕದ ಒಕ್ಕೂಟ ಅಗ್ರಗಣ್ಯ ರಾಷ್ಟ್ರ.  ಅದರ ವಿಭಿನ್ನ ನೀತಿ ಅಲ್ಲಿನ ಶಿಕ್ಷಣಪದ್ಧತಿಯ ಮೇಲೆ ಪರಿಣಾಮ ಬೀರುವದಲ್ಲದೆ ಆ ವಿಚಿತ್ರ ನೀತಿಯನ್ನು ಜನತೆಯಲ್ಲಿ ಬೆಳೆಸಲು ನೆರವಾಗುವಂತೆ ವ್ಯವಸ್ಥೆಗೊಂಡಿದೆ.  ಪ್ರಪಂಚದ ಇತರ ದೇಶಗಳಲ್ಲಿ ಕಂಡುಬರುವ ಸಂಘಟನೆಯ ಸಾಮಾನ್ಯ ವಿಧನಗಳಿಗೆ (ಪ್ರಾಥಮಿಕ, ಪ್ರೌಢ, ಉನ್ನತ, ವೃತ್ತಿ ಮತ್ತು ತಾಂತ್ರಿಕ ಇತ್ಯಾದಿ)  ಬದಲಾಗಿ ಬಿಳಿಯರ, ವರ್ಣೀಯರ ಆಫ್ರಿಕದವರ ಶಿಕ್ಷಣ ಸಂಸ್ಥೆಗಳಾಗಿ ವಿಂಗಡಿಸಿ ಭೇದ ಕಲ್ಪಿಸುವ ಸಂಘಟನೆ ಅಲ್ಲಿ ಕಂಡುಬರುತ್ತದೆ.  ಮಾನವೀಯ ದೃಷ್ಟಿಯಿಂದ ಪ್ರತಿ ವಿರೋಧವೆನ್ನಬಹುದಾದ ಈ ನೀತಿ ಅಲ್ಲಿನ ಶಿಕ್ಷಣ ವ್ಯವಸ್ಥೆಗೆ ತಳಹದಿಯಾಗಿದ್ದರೂ ಆಧುನಿಕವೆನ್ನಬಹುದಾದ ಶೈಕ್ಷಣಿಕ  ವಿಧಾನಗಳೆಲ್ಲ ಅಲ್ಲಿ ಬಳಕೆಯಲ್ಲಿರುವುದು ನಿಜವಾಗಿಯೂ ಒಂದು ವಿರೋಧಾಭಾಸವೆನಿಸದಿರದು.  ಈ ಎಲ್ಲ ದೃಷ್ಟಿಗಳಿಂದ ಅಲ್ಲಿನ ಶಿಕ್ಷಣ ಪದ್ಧತಿ ಸ್ವಾಭಾವಿಕವಾಗಿ ಆಸಕ್ತಿ ಹುಟ್ಟಿಸುತ್ತದೆ.

ಇತಿಹಾಸ : ಒಕ್ಕೂಟದ ಹಿಂದಿನ ಇತಿಹಾಸದಲ್ಲಾದ ರಾಜಕೀಯ ಏರುಪೇರುಗಳನ್ನವಲಂಬಿಸಿ ಅಲ್ಲಿನ ಶಿಕ್ಷಣಪದ್ಧತಿಯಲ್ಲೂ ಬದಲಾವಣೆಗಳಾಗುತ್ತ ಬಂದಿವೆ. 17-18ನೆಯ ಶತಮಾನಗಳಲ್ಲಿ ಗುಡ್‍ಹೋಪ್  ಭೂಶಿಖರದಲ್ಲಿ ವಸಾಹತು ಮಾಡಿಕೊಂಡ ಕ್ಯಾಲ್ವಿನ್ ಕ್ರೈಸ್ತಪಂಥದ ಪಾದ್ರಿಗಳ ಚರ್ಚಿನ ನಿಯಂತ್ರಣದಲ್ಲಿ ಶಿಕ್ಷಣ ಇರಬೇಕೆಂದು ನಂಬಿದ್ದರು. ಆದ್ದರಿಂದ ಅಲ್ಲಿ ಎಚ್ ಈಸ್ಟ ಇಂಡಿಯಾ ಕಂಪನಿಯ ಆಡಳಿತ ಕಾಲದಲ್ಲಿ ಶಿಕ್ಷಣ ಸೌಲಭ್ಯವನ್ನು ಪಾದ್ರಿಗಳೇ ಏರ್ಪಡಿಸುತ್ತಿದ್ದುದಲ್ಲದೆ ಶಾಲೆಗಳಲ್ಲಿ ಮುಖ್ಯವಾಗಿ ಧಾರ್ಮಿಕ ಶಿಕ್ಷಣಕ್ಕೆ ಪ್ರಾಧಾನ್ಯವಿತ್ತಿದ್ದರು. ಇದು ಹದಿನೆಂಟನೆಯ ಶತಮಾನದ ಕೊನೆಯವರೆಗೂ ಮುಂದುವರಿದು ಆ ವಸಾಹತುಗಳು ತಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರೇಮಾಭಿಮಾನಗಳನ್ನು ಬೆಳೆಸಿಕೊಂಡಿದ್ದವು. 1806ರಲ್ಲಿ ಆ ಭಾಗ ಬ್ರಿಟಿಷ್ ಅಡಳಿತಕ್ಕೆ ಬಂದಾಗ ಅವರು ತಮ್ಮ ನಾಡಿನ ಶಿಕ್ಷಣ ಪದ್ಧತಿಯನ್ನು ನಾಟಿಹಾಕಲು ಯತ್ನಿಸಿದಾಗ ಅಲ್ಲಿನ ವಸಾಹತುದಾರರು ಬಲವಾಗಿ ಪ್ರತಿಭಟಿಸಿದರು.  ಇದು ಮುಂದೆ ಬೋಯರ್ ಜನ ಬ್ರಿಟಿಷರ್ ಆಡಳಿತವನ್ನು ವಿರೋಧಿಸಲೂ ಕಾರಣವಾಯಿತು.  ಮುಂದೆ 1836-38ರಲ್ಲಿ ಬೋಯರ್ ಜನ ಆ ಸ್ಥಳವನ್ನೇ ತೊರೆದು ಉತ್ತರಕ್ಕೆ ವಲಸೆ ಹೋದರು.  ಅಲ್ಲಿ ಸ್ಥಾಪಿಸಿದ ದಕ್ಷಿಣ ಆಫ್ರಿಕದ ಒಕ್ಕೂಟವನ್ನು (ಅರೆಂಜ್ ಫ್ರೀಸ್ಟೇಟ್ ಮತ್ತು ಟ್ರಾನ್ಸ್‍ವಾಲ್‍ಗಳನ್ನೊಳಗೊಂಡಂತೆ) ಸ್ಥಾಪಿಸಿಕೊಂಡರು. ಅಲ್ಲಿ ತಮ್ಮ ಹಿಂದಿನ ನಾಡಿನ ಶಿಕ್ಷಣಪದ್ಧತಿಯನ್ನು ಸ್ಥಾಪಿಸಿ ಸ್ಥಳೀಯ ಪ್ರಾಧಿಕಾರವನ್ನು ಆಚರಣೆಗೆ ತಂದರು. ಕ್ರೈಸ್ತತತ್ತ್ವಾನುಸಾರ ರಾಷ್ಟ್ರೀಯ ಪದ್ಧತಿಯನ್ನು ಸ್ಥಾಪಿಸಿದ್ದ ಈ ಪ್ರಾಂತ್ಯಕ್ಕೂ ಸ್ಥಳೀಯ ಸ್ವಾಯತ್ತತೆಯಿತ್ತು. ಹೀಗೆ ವಲಸೆ ಹೊರಟ ಬೋಯರ್ ಜನರಲ್ಲಿ ಒಂದು ಗುಂಪು ಪೂರ್ವಕ್ಕೆ ಡ್ರೇಕನ್‍ಬರ್ಗ ಪರ್ವತಶ್ರೇಣಿಯನ್ನು ದಾಟಿ ಟ್ರನ್ಸ್‍ವಾಲಿಗೆ ಬಂದರು. ಅದನ್ನು ಪ್ರತ್ಯೇಕ ಪ್ರಾಂತ್ಯವನ್ನಾಗಿ ಮಾಡಿಕೊಂಡರು. ಆದರೆ ಇದನ್ನು ಬ್ರಿಟಿಷ್‍ರು 1843ರಲ್ಲಿ ಆಕ್ರಮಿಸಿಕೊಂಡರು. ಮುಂದೆ 1856ರಲ್ಲಿ ಅದು ಪ್ರತ್ಯೇಕ ವಸಹತಾಗಿ ಮಾರ್ಪಟ್ಟಿತು. 1899-1902 ಬೋಯರ್ ಯುದ್ಧದ ಫಲವಾಗಿ ಬೋಯರ್ ಒಕ್ಕೂಟ ಕೊನೆಗೊಂಡಿತು. ಮುಂದೆ 1906ರಲ್ಲಿ ಅರೆಂಜ್ ಫ್ರಿಸ್ಟೆಟಿಗೂ 1907ರಲ್ಲಿ ಟ್ರಾನ್ಸ್ವಾಲಿಗೂ ಜವಾಬ್ದಾರಿ ಸರ್ಕಾರ ಲಭಿಸಿದುವು. ಅನಂತರವೇ ದಕ್ಷಿಣ ಆಫ್ರಿಕದ ಶಿಕ್ಷಣ ವ್ಯವಸ್ಥೆ ನಿರ್ದಿಷ್ಟ ರೀತಿಯಲ್ಲಿ ಬೆಳೆಯಲನುವಾದುದು.

1907ರಲ್ಲಿ ಅರೆಂಜ್ ಫ್ರಿಸ್ಟೇಟಿನಲ್ಲೂ 1908ರಲ್ಲಿ ಟ್ರಾನ್ಸ್‍ವಾಲಿನಲ್ಲೂ ಶಿಕ್ಷಣ ಸಚಿವಾಲಯಗಳು ಏರ್ಪಟ್ಟುವು. ಅದೇ ವರ್ಷಗಳಲ್ಲಿ ಆಯಾ ಪ್ರಾಂತ್ಯದಲ್ಲಿ ಮಾತೃಭಾಷೆಯ ಬೋಧನೆಗೂ ಧಾರ್ಮಿಕ ಶಿಕ್ಷಣಕ್ಕೂ ಸ್ಥಳೀಯ ನಿಯಂತ್ರಣಕ್ಕೂ ಅವಕಾಶ ಕಲ್ಪಿಸುವ ಶಿಕ್ಷಣ ಶಾಸನಗಳನ್ನು ಹೊರಡಿಸಲಾಯಿತು. ಈ ಕಾಯದೆಯಿಂದ ಮುಂದೆ ಕೇಪ್ ಕಾಲೋನಿ, ನೇಟಾಲ್, ಅರೆಂಜ್ ಫ್ರಿಸ್ಟೇಟ್ ಮತ್ತು ಟ್ರನ್ಸ್‍ವಾಲ್ ಪ್ರಾಂತ್ಯಗಳು ಸೇರಿ 1910ರಲ್ಲಿ ಸಂಯುಕ್ತ ರಾಜ್ಯವನ್ನು ರಚಿಸಿಕೊಂಡಾಗ ಇಂಗ್ಲಿಷ್ ಮತ್ತು ಡಚ್ ಭಾಷೆಗಳಿಗೆ ಸಮಾನ ಸ್ಥಾನವನ್ನು ಕೊಡುವ ದ್ವಿಭಾಷಾಸೂತ್ರಕ್ಕೆ ನಾಂದಿಯಾಯಿತೆನ್ನಬಹುದು.

ಸಂಯುಕ್ತ ರಾಜ್ಯದಲ್ಲಿ ಶಿಕ್ಷಣ : 1910ರಲ್ಲಿ ನಾಲ್ಕು ಪ್ರಾಂತ್ಯಗಳೂ ಒಟ್ಟುಗೂಡಿ ಸಂಯುಕ್ತ ರಾಜ್ಯವನ್ನು ರಚಿಸಿಕೊಂಡಾಗ ಪ್ರತಿಯೊಂದು  ಪ್ರಾಂತ್ಯವೂ (ವಸಾಹತು) ತನ್ನದೇ ಆದ ಪ್ರಾಥಮಿಕ, ಪ್ರೌಢ ಮತ್ತು ಅಧ್ಯಾಪಕರ ವೃತ್ತಿಶಿಕ್ಷಣಗಳ ವ್ಯವಸ್ಥೆಯನ್ನು ಹೊತ್ತು ಉನ್ನತ ಶಿಕ್ಷಣ ಆಗತಾನೇ ಪ್ರಾರಂಬಿಸಿದ್ದುವು. ವೃತ್ತಿ ಮತ ತಾಂತ್ರಿಕ ಶಿಕ್ಷಣಕ್ಕೆ, ಯಾವ ವ್ಯವಸ್ಥೆಯೂ ಏರ್ಪಟ್ಟಿರಲಿಲ್ಲ.  ಪ್ರತಿ ಪ್ರಾಂತ್ಯದಲ್ಲೂ ಪ್ರತ್ಯೇಕ ಶಿಕ್ಷಣ ಶಾಖೆಯ ನಿರ್ದೆಶಕರಿದ್ದರು.  1909ರ ಶಾಸನದ ಪ್ರಕಾರ ಸಂಯುಕ್ತ ರಾಜ್ಯದ ಸಂಸತ್ತು ಉನ್ನತ ಶಿಕ್ಷಣವನ್ನೂ ಪ್ರಾಂತ್ಯಗಳೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನೂ ವಹಿಸಿಕೊಂಡವು. ಅನಂತರದ ದಿನಗಳಲ್ಲಿ ಉನ್ನತ ಶಿಕ್ಷಣದ ವ್ಯಾಪ್ತಿಯ ಬಗ್ಗೆ ವಿಭಿನ್ನ ಅರ್ಥ ಕಲ್ಪನೆಯಾಗಿ ಕೇಂದ್ರ ಮತ್ತು ಪ್ರಾಂತೀಯ ಸರ್ಕಾರಗಳ ಅಧಿಕಾರ ವ್ಯಾಪ್ತಿಯಲ್ಲಿ ಗೊಂದಲ ಹುಟ್ಟಿಕೊಂಡಿತು. ಈ ಗೊಂದಲ 1950ರ ವರೆಗೆ ಹಾಗೇ ಇದ್ದು ಕೊನೆಗೆ ವಿಶ್ವವಿದ್ಯಾಲಯ, ಕಲಾಶಾಸ್ತ್ರ, ಸಂಗೀತ, ಗಣಿಕೆಲಸ, ಕೃಷಿ, ಔಷಧಿ ನಿರ್ಮಾಣ, ನೌಕಾಯನ- ಇವುಗಳ ವಿದ್ಯಾಲಯಗಳು, ಉನ್ನತ ವೃತ್ತಿ ಶಿಕ್ಷಣ ಸಂಸ್ಥೆಗಳು, ಪ್ರೌಢಶಾಲೆಯ  ಅಧ್ಯಾಪಕರ ಶಿಕ್ಷಣ ಸಂಸ್ಥೇಗಳು, ಶಿಶುವಿಹಾರದ ಅಧ್ಯಾಪಕರ ಶಿಕ್ಷಣ ಸಂಸ್ಥೆಗಳು, ಇವೆಲ್ಲ ನೀಡುವ ಶಿಕ್ಷಣವೆಲ್ಲ ಉನ್ನತ ಶಿಕ್ಷಣವೆಂದು ಸ್ಪಷ್ಟೀಕರಣವಾಯಿತು. 1928 ರಿಂದ ಕೇಂದ್ರ ಸರ್ಕಾರ ಕಲೆ ಮತ್ತು ವಿಜ್ಞಾನಶಾಸ್ತ್ರ ಶಾಖೆ ವಿಶಿಷ್ಟ ಶಾಲೆಗಳನ್ನು ಹಾಗೂ ಅಂಗವಿಕಲರ ಶಾಲೆಗಳನ್ನು ಆರಂಭಿಸುವ ಹಾಗೂ ಖಾಸಗಿ ಶಾಲೆಗಳಿಗೆ ಅನುದಾನ ನೀಡುವ ಕಾರ್ಯವನ್ನು ನಿರ್ವಸಿಸುತ್ತಿತ್ತು. ಪ್ರಾಂತೀಯ ಶಿಕ್ಷಣ ಶಾಖೆಯ ಪ್ರಾಥಮಿಕ, ಪ್ರೌಢ ಮತ್ತು ಅಧ್ಯಾಪಕರ ಶಿಕ್ಷಣ ಸೌಲಭ್ಯವನ್ನೊದಗಿಸುವ ಹೋಣೆಯನ್ನು ಪಡೆದುಕೊಂಡಿತು. 1948ರ ಶಾಸನದನ್ವಯ ಅದು ಮಂದಬುದ್ದಿಯವರಿಗೂ ಹಿಂದುಳಿದವರಿಗೂ ಅಂಗವಿಕಲರಿಗೂ ಶಾಲೆಗಳನ್ನು ಏರ್ಪಡಿಸುವ ಹೊಣೆಯನ್ನು ವಹಿಸಿಕೊಳ್ಳಬೇಕಾಯಿತು.

1910ರ  ಅನಂತರ ಪ್ರತಿಪ್ರಾಂತ್ಯವೂ ತನ್ನ ಅಧಿಕಾರದ ಅಪರಿಮಿತಿಗೆ ಬಂದ ಶಿಕ್ಷಣ ಕ್ಷೇತ್ರವನ್ನು ತನ್ನದೇ ಆದ ರೀತಿಯಲ್ಲಿ ವ್ಯವಸ್ಥೆಗೊಳಿಸಲಾರಂಬಿಸಿತು. ಇದರ ಫಲವಾಗಿ ಕೇಂದ್ರದ ಶಿಕ್ಷಣ ವ್ಯವಸ್ಥೆಗೆ ಸಮಾಂತರವಾಗಿ, ಕೆಲವು ಕ್ಷೇತ್ರಗಳ ಶಿಕ್ಷಣ ಸೌಲಭ್ಯದ ಪರಸ್ಪರ ವ್ಯಾಪ್ತಿಗೂ (ಓವರ್‍ಲ್ಯಾಂಪಿಗ್) ಅಧಿಕಾರ ತಿಕ್ಕಾಟವೂ ಉಂಟಾದುವು. ಈಲೋಪದೋಷಗಳನ್ನು ನಿವಾರಿಸುವುದು ಅಗತ್ಯವಾಯಿತು.  1962ರಲ್ಲಿ ಇಡೀ ಸಂಯುಕ್ತ ರಾಜ್ಯದಲ್ಲಿ ಶಿಕ್ಷಣದಲ್ಲಿ ಸಮನ್ವಯವನ್ನೇರ್ಪಡಿಸಲು ರಾಷ್ಟ್ರೀಯ ಶಿಕ್ಷಣ ನೀತಿಗೂ ರಾಷ್ಟ್ರೀಯ ಶಿಕ್ಷಣ ಸಲಹಮಂಡಳಿಯ ರಚನೆಗೆ ಅವಕಾಶ ಮಾಡಿಕೊಡುವ ಕಾನೂನು ಜಾರಿಗೆ ಬಂತು. ಆ ಮಂಡಲಿಯ ಸಲಹೆಯಂತೆ 1967ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯೂ ರಾಷ್ಟ್ರೀಯ ಶಿಕ್ಷಣ ಸೇವಾನೀತಿಗೂ ಉನ್ನತ ವೃತ್ತಿ ಶಿಕ್ಷಣಕ್ಕೂ ಸಂಬಂಧಿಸಿದ ಮೂರು ಕಾಯದೆಗಳನ್ನು ಮಾಡಲಾಯಿತು. ಇದರಿಂದ ಕೇಂದ್ರ ಶಿಕ್ಷಣ ಸಚಿವರು ಕೇಂದ್ರದ ಮತ್ತು ಪ್ರಾಂತ್ಯಗಳ ಸಲಹಾಮಂಡಲಿಗಳೊಂದಿಗೆ ಪರ್ಯಾಲೋಚಿಸಿ ಇಡೀ ಸಂಯುಕ್ತರಾಜ್ಯದ ಬಿಳಿಯರ ಮಕ್ಕಳ ಎಲ್ಲ ರೀತಿ ಶಿಕ್ಷಣದ ಬಗ್ಗೆಯೂ ನೀತಿ ನಿರೂಪಿಸುವ ಅಧಿಕಾರವನ್ನು ಪಡೆದುಕೊಂಡು ಪ್ರಾಥಮಿಕ, ಪ್ರೌಢ, (ಸಾಮಾನ್ಯ)  ಕಡ್ಡಾಯ ಶಿಕ್ಷಣದ ವಯೋಮಿತಿಯೊಳಗಿನ  ಮಕ್ಕಳಿಗಾಗಿ ಏರ್ಪಡಿಸಿರುವ ಪೂರ್ವಕಲದ ಔದ್ಯೋಗಿಕ ಶಿಕ್ಷಣ ಮತ್ತು ವಿಶಿಷ್ಟ ಶಿಕ್ಷಣ ಇವು ಪ್ರಾಂತ್ಯ ಸರ್ಕಾರಗಳ ಆಡಳಿತಕ್ಕೆ ಸೇರಿದುವು.  ಆದರೆ ಆ ಶಾಲೆಗಳು ಆರಂಭಿಸಿ ನಡೆಸುವ ಕಾರ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು  ಅನುಸರಿಸಬೇಕಾಗಿತ್ತು.  ಕೇಂದ್ರದಲ್ಲಿ 1968ರಲ್ಲಿ ಉನ್ನತ ಶಿಕ್ಷಣ ಶಾಲೆಯನ್ನು ಏರ್ಪಡಿಸಿ ವಿಶ್ವವಿದ್ಯಾಲಯ, ಉನ್ನತ ವೃತ್ತಿಶಿಕ್ಷಣ, ಅಂಗವಿಕಲರ ಶಿಕ್ಷಣ, ಉಮೇದುದಾರರ ಶಿಕ್ಷಣ, ಲಲಿತಕಲಾ ಶಿಕ್ಷಣ, ವೈದ್ಯಕೀಯ ಸಿಬ್ಬಂದಿಯ ಶಿಕ್ಷಣ, ರಾಷ್ಟ್ರೀಯ ಪರೀಕ್ಷಾಮಂಡಲಿಗಳು, ಶ್ರಾವ್ಯ ದೃಶ್ಯೋಪಕರಣದ ಶಿಕ್ಷಣಕೇಂದ್ರ-ಇವೆಲ್ಲ ಆ ಆಡಳಿತ ಪರಿಮಿತಿಗೆ ಸೇರಿದುವು. ಜೊತೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಂಶೋಧನ ಸಂಸ್ಥೆಯೂ ಅದಕ್ಕೆ ಸೇರಿತು. ಈ ಸಂಸ್ಥೆ 1960ರಲ್ಲಿ ಮಾನವಿಕ ಸಂಶೋಧನ ಮಂಡಲಿ ಎಂಬ ಹೆಸರಿನಿಂದ ಪ್ರತ್ಯೇಕ ಹಾಗೂ ಸ್ವಾಯತ್ತಾಸ್ಥಾನವನ್ನು ಪಡೆದುಕೊಂಡಿದೆ.

ಶ್ವೇತವರ್ಣೇತರರ ಶಿಕ್ಷಣ : ದಕಿಣ ಆಫ್ರಿಕದಲ್ಲಿ ಬಿಳಿಯರಲ್ಲದವರಲ್ಲಿ ಮೂರು ವಿಧದವರಿದ್ದಾರೆ: ಏಳು ಬುಡಕಟ್ಟುಗಳನ್ನೊಳಗೊಂಡ ಬಂಟುಗಳು, ಮಲಯ ವಂಶಜರನ್ನೂ ಮಿಶ್ರಸಮತತಿಯವರನ್ನೂ ಒಳಗೊಂಡ ವರ್ಣೀಯರು ಮತ್ತು ಭಾರತೀಯರು.  ಇವರೆಲ್ಲ ಒಟ್ಟಿಗೆ ಬಿಳಿಯರ ನಾಲ್ಕರಷ್ಟು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೊದಲು ಇಲ್ಲಿಗೆ ಆಗಮಿಸಿದ ಪಾದ್ರಿಗಳು ಬಿಳಿಯರಲ್ಲದವರ ಮಕ್ಕಳಿಗಾಗಿ ಶಾಲೆಗಳನ್ನು ಆರಂಭಿಸಿದರು. ಅನಂತರ ಅದಕ್ಕೆ ವಸಾಹತು ಸರ್ಕರದ ಅನುದಾನವೂ ದೊರಕಲಾರಂಭಿಸಿತು. 1910ರ ಅನಂತರ ಪ್ರಾಂತೀಯ ಸರ್ಕಾರಗಳಿಂದ ಅನುದಾನ ದೊರಕುತ್ತಿತ್ತು. ಬಿಳಿಯರಲ್ಲದವರ  ಪ್ರಾಥಮಿಕ ಫ್ರೌಢ ಮತ್ತು ಅಧ್ಯಾಪಕರ ಶಿಕ್ಷಣ ಅಂದಿನಿಂದ ಪ್ರಾಂತೀಯ ಸರ್ಕಾರಗಳಿಗೆ ಸೇರಿತು.

ಬಂಟುಕುಲದವರು ಯಹೂದ್ಯ ಅಥವಾ ಕ್ರೈಸ್ತರಲ್ಲದ ಆಫ್ರಿಕದ ಮೂಲ ನಿವಾಸಿಗಳು. ಅವರ ಶಿಕ್ಷಣದಲ್ಲಿ ಪಾದ್ರಿಗಳು ಅತ್ಯಾಸಕ್ತಿಯನ್ನು ತಳೆದಿದ್ದರು. 1953ರ ತನಕ ಅವರೇ ವ್ಯವಸ್ಥೆಗೊಳಿಸಿ ನಡೆಸುತ್ತಿದ್ದರು. ಅನಂತರ ಅದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿಹೋಯಿತು.  1958ರಲ್ಲಿ ಅವರ ಶಿಕ್ಷಣದ ಆಡಳಿತಕ್ಕಾಗಿ ಕೇಂದ್ರದಲ್ಲಿ ಪ್ರತ್ಯೇಕ ಆಡಳಿತ ಶಾಖೆಯನ್ನು ಆರಂಭಿಸಿದೆ; ಅದಕ್ಕೆ ಸೇರಿದಂತೆ ಏಳು ಉಪಶಾಖೆಗಳೂ ಏರ್ಪಟ್ಟಿದೆ.  ಇಡೀ ರಾಷ್ಟ್ರವನ್ನು ಏಳು ವಿಭಾಗಗಳನ್ನಾಗಿ ಮಾಡಿ ಒಂದೊಂದಕ್ಕೂ ಒಬ್ಬೊಬ್ಬ ನಿರ್ದೇಶಕರನ್ನು ನೇಮಿಸಿದೆ. ಒಂದೊಂದು ವಿಭಾಗದಲ್ಲೂ ಅನೇಕ ತನಿಖಾಧಿಕಾರಿಗಳಿರುವರು. ಅವರೆಲ್ಲರ ಮುಖ್ಯಾಧಿಕಾರಿ ಒಬ್ಬ ಬಿಳಿಯ. ಪ್ರಾಥಮಿಕ ಶಿಕ್ಷಣದ ವಯೋಮಾನದ ಶೇ. 80ರಷ್ಟು ಮಕ್ಕಳು ಶಾಲೆಗೆ ಸೇರಿರುವರು. ಎಲ್ಲರಿಗೂ ಆ ಹಂತದ ಶಿಕ್ಷಣವನ್ನು ಕಡ್ಡಾಯಮಾಡುವ ಸರ್ಕಾರದ ಯತ್ನ ಫಲಕಾರಿಯಾಗಿಲ್ಲ.

ಬಂಟುಗಳ ಶಿಕ್ಷಣಕ್ಕಾಗಿ ಏರ್ಪಟ್ಟಿರುವ ಕೇಂದ್ರದ ಇಲಾಖೆಗೆ ಅವರ ಶಾಲೆಗಳ ಅಧ್ಯಾಪಕರ ಶಿಕ್ಷಣ ಸಂಸ್ಥೆಗಳೂ ಸೇರಿವೆ.  ಅದರ ಮೂರು ಪ್ರಮುಖಉಪಕುಲದವರಿಗಾಗಿ ಏರ್ಪಟ್ಟಿರುವ ಮೂರು ವಿಶ್ವವಿದ್ಯಾಲಯಗಳೂ ಅದರ ಆಡಳಿತಕ್ಕೊಳಪಟ್ಟಿವೆ.  ಕ್ಸೋಸಾ ವರ್ಗದವರಿಗಾಗಿ ಫೋರ್ಟ್ ವಿಶ್ವವಿದ್ಯಾಲಯವೂ ಜûೂಲೂ ವರ್ಗದವರಿಗಾಗಿ ಜûೂಲೂ ಲ್ಯಾಂಡ್ ವಿಶ್ವವಿದ್ಯಾಲಯವೂ ಉತ್ತರದ ಸೋಠೋ ವರ್ಗದವರಿಗಾಗಿ, ನಾರ್ತ್ ವಿಶ್ವವಿದ್ಯಾಲಯವೂ ಇದೆ. ಇನ್ನುಳಿದ ಬಂಟು ವರ್ಗದವರು ಇವುಗಳಲ್ಲಾವುದಾದರೂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಬಹುದು. ಈ ಮೂರು ವಿಶ್ವವಿದ್ಯಾಲಯಗಳೂ ಕೇವಲ ವಿಶ್ವವಿದ್ಯಾಲಯದ ಕಾಲೇಜುಗಳು ಮಾತ್ರ.  ಅವುಗಳ ವಿದ್ಯಾರ್ಥಿಗಳು ದಕ್ಷಿಣ ಆಫ್ರಿಕದ ವಿಶ್ವವಿದ್ಯಾಲಯ ನಡೆಸುವ ಪರೀಕ್ಷೆಗಳಿಗೆ ಕೂಡಬೇಕು.  ಮೂರು ವಿಶ್ವವಿದ್ಯಾಲಯಗಳಲ್ಲೂ ಒಟ್ಟು 1.000 ಮಂದಿ ಬಂಟು ವಿದ್ಯಾರ್ಥಿಗಳು ಓದುತ್ತಿದ್ದಾರೆ.  ಅದಕ್ಕೂ ಸ್ವಲ್ಪ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ದಕ್ಷಿಣ ಆಫ್ರಿಕ ವಿಶ್ವವಿದ್ಯಾಲಯ ನಡೆಸುವ ಅಂಚೆ ಶಿಕ್ಷಣದ ಪರೀಕ್ಷೆಗಾಗಿ ವ್ಯಾಸಂಗ ಮಡುತ್ತಾರೆ.

ವರ್ಣಿಯರ ಶಿಕ್ಷಣ: 1910ರಿಂದ 1964ರ ವರೆಗೆ ವರ್ಣೀಯರ ಶಿಕ್ಷಣ ಪ್ರಾಂತೀಯ ಸರ್ಕಾರಗಳಿಗೆ ಸೇರಿತ್ತು.  1963ರ ರಾಜ್ಯಶಾಸನವೊಂದರ ಪ್ರಕಾರ ಅವರ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳೂ ವರ್ಣೀಯರ ಶಿಕ್ಷಣ ಸಲಹಾ ಮಂಡಲಿಗೆ ವರ್ಗವಾಯಿತು. ವರ್ಣೀಯರ ಶಿಕ್ಷಣ ಸಚಿವರಿಗೆ ಆ ಮಂಡಲಿ ಸಲಹೆ ನೀಡುತ್ತದೆ.  ಇಡೀ ಒಕ್ಕೂಟದ ವರ್ಣೀಯರ ಶಿಕ್ಷಣಕ್ಕೆಲ್ಲ ಒಬ್ಬ ನಿರ್ದೇಶಕರಿದ್ದಾರೆ. ಅವರು ವರ್ಣೀಯರ ಶಿಶುವಿಹಾರ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು, ಕೈಗಾರಿಕಾ ಶಾಲೆಗಳು, ಔದ್ಯೋಗಿಕ ಮತ್ತು ತಾಂತ್ರಿಕ ಕಾಲೇಜುಗಳು, ಸುಧಾರಣಾ ಶಾಲೆಗಳು, ವಿಶಿಷ್ಟ ಶಾಲೆಗಳು ಮುಂತಾದುವುಗಳನ್ನೆಲ್ಲ ನೋಡಿಕೊಳ್ಳುವರು. ಜೊತೆಗೆ ಅವರು ಶೈಕ್ಷಣಿಕ, ಔದ್ಯೋಗಿಕ ಮತ್ತು ಮನೋವೈಜ್ಞಾನಿಕ ಮಾರ್ಗದರ್ಶನಕ್ಕೂ ವ್ಯವಸ್ಥೆ ಮಾಡುವರು.  ಸಲಹಾ ಮಂಡಲಿಯಲ್ಲಿ ನಾಲ್ಕು ಪ್ರಾಂತ್ಯಗಳ ವರ್ಣೀಯ ಪ್ರತಿನಿಧಿಗಳೂ ಇರುವರು.

ಭಾರತೀಯ ವಂಶಸ್ಥರ ಶಿP್ಪ್ಷಣ : ಬಂಟೂ ಮತ್ತು ವರ್ಣೀಯರ ಶಿಕ್ಷಣದಂತೆ ಭಾರತೀಯ ವಂಶಸ್ಥರ ಶಿಕ್ಷಣವೂ 1910ರಲ್ಲಿ ಪ್ರಾಂತೀಯ ಆಡಳಿತಕ್ಕೆ ಸೇರಿತು. 1965ರಲ್ಲಿ ಅದು ಕೇಂದ್ರ ಸಕಾರದ ಭಾರತೀಯ ವ್ಯವಹಾರ ಶಾಖೆಗೆ (ಡಿಪಾರ್ಟ್‍ಮೆಂಟ್ ಆಫ್ ಇಂಡಿಯನ್ ಅಫೇರ್ಸ್) ವರ್ಗವಾಯಿತು.  ಈ ಶಾಖೆಯ ಅಂಗವಾಗಿ ಒಂದು ಶಿಕ್ಷಣ ವಿಭಾಗವಿದೆ.  ಅದು ಭಾರತೀಯರ ಮಕ್ಕಳಿಗೆ ಪ್ರಾಥಮಿಕ, ಪ್ರೌಢ ಮತ್ತು ಔದ್ಯೋಗಿಕ ಶಿಕ್ಷಣಗಳ ವ್ಯವಸ್ಥೆ ಮಾಡುತ್ತದೆ.  ಜೊತೆಗೆ ವಿಶಿಷ್ಟ ಶಿಕ್ಷಣ, ಅಧ್ಯಾಪಕರ ಶಿಕ್ಷಣ ಮತ್ತು ಉನ್ನತ ಶಿಕ್ಷಣವನ್ನು ಒದಗಿಸುತ್ತದೆ.  ಭಾರತೀಯರಿಗಾಗಿ ಒಂದು ಪ್ರತ್ಯೇಕ ವಿಶ್ವವಿದ್ಯಾಲಯವಿದೆ.  ಬಹುಮಟ್ಟಿಗೆ ಅವರೆಲ್ಲ ನೇಟಾಲ್ ಪ್ರಾಂತ್ಯದಲ್ಲಿ ವಾಸಿಸುವರು.

ಬೋಧನ ಮಾಧ್ಯಮ : 1910ರ ದಕ್ಷಿಣ ಆಫ್ರಿಕದ ರಾಜ್ಯಘಟನೆಯಲ್ಲಿ ಉಲ್ಲೇಖಿಸಿರುವಂತೆ ಇಂಗ್ಲಿಷ್ ಮತ್ತು ಡಚ್ ಭಾಷೆಗಳೆರಡೂ ಅಧಿಕೃತ ಭಾಷೆಗಳಾಗಿದ್ದು ಸಮಾನ ಸ್ಥಾನಮಾನಗಳನ್ನು ಹೊಂದಿದೆ.  ಬಿಳಿಯರ ಶಾಲೆಗಳಲ್ಲಿ ಇಂಗ್ಲಿಷ್ ಅಥವಾ ಡಚ್ ಭಾಷೆಯನ್ನು ಬೋಧನಮಾಧ್ಯಮವಾಗಿ ಬಳಸಲಾಗುತ್ತಿದೆ. ಆಫ್ರಿಕನ್ನರಿಗೆ ತಮ್ಮದೇ ಆದ ಮಾತೃಭಾಷೆ ಇದ್ದರೂ ಅವರ ಮಕ್ಕಳಿಗೆ ಶಾಲೆಗಳಲ್ಲಿ ಡಚ್ ಭಾಷೆಯನ್ನೇ ಇಂದಿಗೂ ಬೋಧನಾಮಾಧ್ಯಮವಾಗಿ ಬಳಸಲಾಗುತ್ತಿದೆ. ಚರ್ಚುಗಳಲ್ಲೂ ಇದನ್ನು ಬೋಧನಮಾಧ್ಯಮವನ್ನಾಗಿ ಬಳಸಲಾಗುತ್ತಿದೆ. 1914ರಲ್ಲಿ ಕೇಪ್ ಪ್ರಾಂತ್ಯದ ಮತ್ತು ಟ್ರಾನ್ಸ್‍ವಾಲ್ ಮತ್ತು ಆರೆಂಜ್ ಫ್ರೀಸ್ಟೇಟ್ ಪ್ರಾಂತ್ಯಗಳ ಮಂಡಲಿಗಳು ಡಚ್ ಎಂದರೆ ಆಫ್ರಿಕನ್ ಭಾಷೆಗಳನ್ನೂ ಒಳಗೊಂಡವು ಎಂಬ ಅರ್ಥವನ್ನು ಕೊಟ್ಟವು. 1916ರಲ್ಲಿ ಡಚ್ ಸುಧಾರಿತ ಚರ್ಚಿನವರು ಆಫ್ರಿಕನ್ ಭಾಷೆಯನ್ನು ಬೋಧನ ಮಾದ್ಯಮವಾಗಿ ಅಂಗೀಕರಿಸಿದರು. 1917ರಿಂದ ಆ ಮೂರು ಪ್ರಾಂತ್ಯಗಳೂ ಆಫ್ರಿಕನ್ ಭಾಷೆಯನ್ನು ಪ್ರಾಂತೀಯ ಭಾಷೆಯಾಗಿ ಅಂಗೀರಕರಿಸಿದುವು. 1920ರ ಸುಮಾರಿನಲ್ಲಿ ಆ ಪ್ರಾಂತಗಳು ಡಚ್ ಭಾಷೆಯನ್ನು ಶಾಲೆಗಳ ಪಠ್ಯಕ್ರಮದಿಂದ ತೆಗೆದುಹಾಕಿ ಅದರ ಸ್ಥಳದಲ್ಲಿ ಆಫ್ರಿಕನ್ ಭಾಷೆಯನ್ನು ಸೇರಿಸಿದುವು.

ಡಚ್ಚರಿಗೂ ಬ್ರಿಟಿಷರಿಗೂ ಹಿಂದೆ ಆರಂಭವಾದ ಕದನ ಇಂದಿಗೂ ಭಾಷಾ ಸ್ವರೂಪದ ಸಾಂಸ್ಕ್ರತಿಕ ತಿಕ್ಕಾಟದಲ್ಲಿ ಮುಂದುವರಿಯುತ್ತಿದೆ. ಅದರ ಫಲವಾಗಿ ಇಂಗ್ಲಿಷರಿಗೂ ಆಫ್ರಿಕನ್ನರಿಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಂತಸ್ತಿನಲ್ಲಿ ಅವರವರ ಭಾಷೆಯಲ್ಲೇ ಭೋಧಿಸಬೇಕಾಗಿದ್ದು ಅವೆರಡು ಮಟ್ಟದ ಶಿಕ್ಷಣ ಸಂಸ್ಥೆಗಳೂ ಪ್ರತ್ಯೇಕ ಭಾಷೆಯವಾಗಿ ವ್ಯವಸ್ಥೆಗೊಂಡಿವೆ.  ಅದರಿಂದ ಅವೆರಡು ವರ್ಗದವರ ಮಕ್ಕಳಿಗೂ ಅವರವರ ಭಾಷಾ ಮಾಧ್ಯಮವನ್ನು ಬಳಸಲಾಗುತ್ತಿದೆ.  ಅದರೊಡನೆ ಅಧಿಕೃತ ಭಾಷೆಯೆಂದು ಪರಿಗಣಿಸಿರುವ ಇನ್ನೊಂದು ಭಾಷೆಯನ್ನವರು ಕ್ರಮಕ್ರಮವಾಗಿ ಕಲಿಯುವರು. ಕೆಲವು ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮವನ್ನು ಅಂಗೀಕರಿಸಿ ಒಂದೊಂದು ಮಾತೃಭಾಷಾ ಮಾಧ್ಯಮಕ್ಕೂ ಪ್ರತ್ಯೇಕ ತರಗತಿಗಳನ್ನು ಏರ್ಪಡಿಸಲಾಗಿದೆ. ಆದರೆ ಅಂಥ ಜೋಡಿಭಾಷಾ ಮಾಧ್ಯಮದ ಪಾಠಶಾಲೆಗಳ ಸಂಖ್ಯೆ ಕಡಿಮೆ. ಹಾಗೂ ಒಂದೇ ಭಾಷಾ ಮಾಧ್ಯಮದ ಇಲ್ಲದೆಡೆ ಮಾತ್ರ ಅದನ್ನು ನಡೆಸಲಾಗುತ್ತಿದೆ.  ದಕ್ಷಿಣ ಆಫ್ರಿಕದ ವರ್ಣೀಯರಲ್ಲಿ ಬಹುಭಾಗ ಆಫ್ರಿಕನ್ ಭಾಷೆಯನ್ನಾಡುತ್ತಾರೆ. ಅದರಲ್ಲಿನ ಭಾರತೀಯ ವಂಶಸ್ಥರು ವಿವಿಧ ಭಾಷೆಗಳನ್ನಾಡುತ್ತಾರೆ. ಎಂದರೆ ಅವರು ಬೇರೆ ಬೇರೆ ಮತೃಭಾಷೆಯವರಾಗಿದ್ದು ಯಾವ ಒಂದು ಭಾರತೀಯ ಭಾಷೆಯನ್ನೂ ಶಿಕ್ಷಣಮಾಧ್ಯಮವನ್ನಾಗಿ ಬಳಸಬಹುದಾದ ಸೌಲಭ್ಯ ಹೊಂದಿಲ್ಲ ಆದ್ದರಿಂದ ಭಾರತೀಯ ವಂಶಸ್ಥರ ಶಾಲೆಗಳಲ್ಲಿ ಇಂಗ್ಲಿಷ್ ಬೋಧನ ಮಾಧ್ಯಮವಾಗಿ ಬಳಕೆಯಲ್ಲಿದೆ.  ಅವರು ತಮ್ಮ ತಮ್ಮ ಮಾತೃಭಾಷೆಯನ್ನು ಶಾಲಾ ಅನಂತರದ ಕಾಲದಲ್ಲಿ ಖಾಸಗಿ ಶಿಕ್ಷಕರ ಸಹಾಯದಿಂದ ಕಲಿತುಕೊಳ್ಳುವರು. ಭಾರತೀಯ ವಂಶಸ್ಥರ ವ್ಯವಹಾರಶಾಖೆ, ಎಲ್ಲೆಲ್ಲಿ ಆಫ್ರಿಕನ್ನರು ಅಧಿಕಸಂಖ್ಯೆಯಲ್ಲಿರುವರೋ ಅಲ್ಲಿನ ಭಾರತೀಯ ಶಾಲೆಗಳಲ್ಲಿ ಆಫ್ರಿಕನ್ ಭಾಷಾಮಾಧ್ಯಮವನ್ನೇ ಬಳಸುವ ಏಪಾಟು ಮಾಡಲು ಆಲೋಚನೆ ಮಾಡುತ್ತಿದೆ.

1991ರವರೆಗೆ ದಕ್ಷಿಣ ಆಫ್ರಿಕದಲ್ಲಿ ಎಲ್ಲ ಪ್ರಜೆಗಳೂ ತಮಗೆ ಬೇಕಾದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವಂತಿರಲಿಲ್ಲ. ಪ್ರತಿ ಜನಾಂಗದವರೂ ತಮ್ಮದೇ ಆದ ಜನಾಂಗದ ಶಾಲೆಗೆ ಸೇರಿಸಬೇಕಾಗಿತ್ತು. ಸ್ಥಳೀಯ ಕಪ್ಪು ಬಣ್ಣದ ಮಕ್ಕಳಿಗಿಂತ ಬಿಳಿಯರ ಮಕ್ಕಳಿಗೆ ಸರ್ಕಾರ ಹೆಚ್ಚು ಹಣವನ್ನು ವಿನಿಯೋಗಿಸುತ್ತಿತ್ತು. 7ರಿಂದ 16ರ ವಯಸ್ಸಿನ ಬಿಳಿಯರ ಮಕ್ಕಳಿಗೆ 1981ರವರೆಗೆ ಖಡ್ಡಾಯ ಶಿಕ್ಷಣ ನಿಯಮವಿತ್ತು. ಕರಿಯರ ಮಕ್ಕಳಿಗೆ ಈ ನಿಯಮ ಅನ್ವಯಿಸುತ್ತಿರಲಿಲ್ಲ. ದೇಶದಲ್ಲಿ ಹತ್ತು ವಿಶ್ವವಿದ್ಯಾನಿಲಯಗಳನ್ನು ಬಿಳಿಯರಿಗಾಗಿಯೇ ಪ್ರಾರಂಭಿಸಲಾಗಿತ್ತು. ಇದರಲ್ಲಿ 4 ವಿಶ್ವವಿದ್ಯಾನಿಲಯಗಳು ಕಪ್ಪು ಜನಾಂಗದವರಿಗೂ ಒಂದು ಏಷ್ಯನ್ನರಿಗೆ ಮತ್ತು ಇತರೇ ಜನಾಂಗದವರಿಗೆ ಪ್ರವೇಶ ನೀಡುತ್ತಿದ್ದವು. ಈಗ ಹಳೆಯ ಪದ್ಧತಿಗಳನ್ನು ಕೈಬಿಟ್ಟು ಉದಾರನೀತಿಯನ್ನು ಎಲ್ಲಾ ವಿಶ್ವವಿದ್ಯಾನಿಲಯಗಳು ಪಾಲಿಸುತ್ತಿವೆ.																	(ಎನ್.ಎಸ್.ವಿ.)

ಆರ್ಥಿಕತೆ

ಗಣಿಗಾರಿಕೆ : ದಕ್ಷಿಣ ಆಫ್ರಿಕದ ಆರ್ಥಿಕಾಭ್ಯುದಯಕ್ಕೆ ಅಲ್ಲಿಯ ಚಿನ್ನದ ಗಣಿಗಳೇ ಅಡಿಪಾಯ. ವಿಶ್ವದ ಚಿನ್ನದ ಪೂರೈಕೆಯಲ್ಲಿ ಅರ್ಧ ಭಾಗ ಬರುವುದು ದಕ್ಷಿಣ ಆಫ್ರಿಕದ ಗಣಿಗಳಿಂದ.  ವಜ್ರ ಇನ್ನೊಂದು ಮುಖ್ಯ ಖನಿಜ. ಇಲ್ಲಿ ದೊರೆಯುವ ಇತರ ಖನಿಜಗಳು ಮ್ಯಾಂಗನೀಸ್, ಕ್ರೋಮಿಯಮ್, ಆಸ್ಬೆಸ್ಟಾಸ್, ಪ್ಲಾಟಿನಮ್, ತವರ, ತಾಮ್ರ, ಸುಣ್ಣ, ಬೆಳ್ಳಿ ಕಲ್ಲಿದ್ದಲು ಹಾಗೂ ಕಬ್ಬಿಣ. 1952ರಿಂದ ಈಚೆಗೆ ಯೂರೇನಿಯಮನ್ನು ಹೆಚ್ಚಾಗಿ ಉತ್ಪಾದಿಸಲಾಗುತ್ತಿದೆ. ಇದು ಚಿನ್ನದ ಅದಿರಿನೊಂದಿಗೆ ಸಿಗುತ್ತದೆ.

ವ್ಯವಸಾಯ:  ದಕ್ಷಿಣ ಆಫ್ರಿಕದ ಮುಖ್ಯ ಬೆಳೆಗಳು ಗೋದಿ, ಮೆಕ್ಕೆಜೋಳ, ನೆಲಗಡಲೆ, ಆಲೂಗೆಡ್ಡೆ, ಗೆಣಸು, ಕಬ್ಬು, ಸೋರ್ಗಂ, ಹೊಗೆಸೊಪ್ಪು, ಕೇಪ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿ ದ್ರಾಕ್ಷಿ ತೋಟಗಳಿವೆ. ನಿಂಬೆ ಜಾತಿಯ ಹಣ್ಣುಗಳು, ಬಾಳೆ, ಮರಸೇಬು-ಇವು ಇತರ ಹಣ್ಣುಗಳು, ಹಣ್ಣುಗಳನ್ನೂ ಜ್ಯಾಮನ್ನೂ ಡಬ್ಬೀಕರಿಸಿ ರಫ್ತು ಮಾಡುತ್ತಾರೆ.  ಕೆಲವು ಕಡೆಗಳಲ್ಲಿ ಮಳೆಯಿಲ್ಲದೆ ಪೈರಿಗೆ ಆಗಾ ನಷ್ಟವಾಗುವುದುಂಟು.  ರಾಜ್ಯದ ನೆಲದಲ್ಲಿ ಶೇಕಡ 10ರಷ್ಟು ಭೂಮಿ ಸಾಗುವಳಿಗೆ ಒಳಪಟ್ಟಿದೆ.  ದನ ಮತ್ತು ಕುರಿಗಳನ್ನು ಭಾರಿ ಮಂದರಗಳಲ್ಲಿ ಸಾಕುವುದೂ ಒಂದು ಮುಖ್ಯ ಕಸಬು. ತೊಗಲು ಮತ್ತು ಕುರಿ ತುಪ್ಪಟ ಇಲ್ಲಿಂದ ರಫ್ತಾಗುತ್ತದೆ.  

ಮೀನುಗಾರಿಕೆ: 1945 ರಿಂದ ಇದು ವಿಶ್ವದ ಹತ್ತು ಪ್ರಮುಖ ಮೀನುಗಾರಿಕೆ ದೇಶಗಳಲ್ಲೊಂದಾಗಿದೆ.  ಈಗ ಇದರದು ಆರನೆಯ ಸ್ಥಾನ.  ದೇಶದಲ್ಲಿ ಮೀನು ಸೇವನೆ ಅಧಿಕವಾಗುತ್ತಿದೆಯಾದರೂ ಇದು ಅಲ್ಲಿಯವರ ಆಹಾರದಲ್ಲಿ ಪ್ರಮುಖವಲ್ಲ.  ಡಬ್ಬೀಕರಿಸಲಾದ ಮೀನಿನಲ್ಲಿ 78%-80% ರಷ್ಟನ್ನು ರಫ್ತು ಮಾಡಲಾಗುತ್ತಿದೆ.

ಅರಣ್ಯಗಾರಿಕೆ :  ಅರಣ್ಯಗಳ ಒದಟ್ಟು ವಿಸ್ತೀರ್ಣ ಸು. 30.000 ಎಕರೆ. ದೇಶದಲ್ಲಿ ಹುಲ್ಲುಗಾಡು ಹೆಚ್ಚು.  ಭಾರಿ ಮರಗಳು ಕಡಿವೆ.  ಬಳಕೆಗೆ ಬೇಕಾದ ಗಟ್ಟಿಮರ ಹಾಗೂ ಚೌಬೀನೆ ದಕ್ಷಿಣ ಅಮೆರಿಕ ಮತ್ತು ಜಪಾನ್‍ಗಳಿಂದ ಆಮದಾಗುತ್ತವೆ.  ಟರ್ಕಿಕೋಳಿ ಮೊದಲಾದ ಪಕ್ಷಿಗಳ ಜೋಲು ಕೊಬ್ಬಿನ ಸಾರವನ್ನು ತೆಗೆದು ರಫ್ತುಮಾಡುತ್ತಾರೆ.

ಕೈಗಾರಿಕೆ : ರಾಷ್ಟ್ರೀಯ ವರಮಾನದ ಅತ್ಯಂತ ಹೆಚ್ಚಿನ ಅಂಶ ಬರುವುದು ಕೈಗಾರಿಕೆಯಿಂದ. ಅನಂತರದ ಸ್ಥಾನಗಳು ಅನುಕ್ರಮವಾಗಿ ಕೃಷಿ, ವಾಣಿಜ್ಯ, ಗಣಿಗಾರಿಕೆ ಇವುಗಳದು. ಎರಡನೆಯ ಮಹಾಯುದ್ಧದ ಅನಂತರ ಕೈಗಾರಿಕೆಗಳು ಶೀಘ್ರವಾಗಿ ಬೆಳೆದಿವೆ. ಹತ್ತಿ ಮತ್ತು ಉಣ್ಣೆ, ಜವಳಿ, ಚಕ್ಕಳ ಹದ ಮಾಡುವುದು, ಮೋಟಾರು ವಾಹನಗಳ ಜೋಡಣೆ, ಕೃತಕ ರಬ್ಬರ್ ತಯಾರಿಕೆ-ಇವು ಪ್ರಮುಖ ಕೈಗಾರಿಕೆಗಳು. ಪೋರ್ಟ್ ಎಲಿಜûಬತ್, ಯೂಟೆನ್‍ಹೇಗ್ ಮತ್ತು ಡರ್ಬನ್ ಪ್ರಮುಖ ಕೈಗಾರಿಕಾ ಕೇಂದ್ರಗಳು.

ಸಾರಿಗೆ : ದಕ್ಷಿಣ ಆಫ್ರಿಕದಲ್ಲಿ 9,600 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳೂ 2,80,000 ಕಿ.ಮೀ. ಪ್ರಾಂತೀಯ ರಸ್ತೆಗಳೂ ಇವೆ.  ಕೇಪ್ ಪ್ರಾಂತ್ಯದಲ್ಲಿ 8,754 ಕಿ.ಮೀ, ನಟಾಲ್ ಪ್ರಾಂತ್ಯದಲ್ಲಿ 2,450 ಕಿ.ಮೀ., ಟ್ರಾನ್ಸ್‍ವಾಲ್‍ನಲ್ಲಿ 5,763 ಕಿ.ಮೀ., ಆರೆಂಜ್ ಫ್ರೀ ಸ್ಟೇಟ್‍ನಲ್ಲಿ 2,670 ಕಿ.ಮೀ., ನೈಋತ್ಯ ಆಫ್ರಿಕದಲ್ಲಿ 2,326 ಕಿ.ಮೀ. ರೈಲುಮಾರ್ಗಗಳಿವೆ. ಪ್ರಮುಖ ರೇವುಗಳಿಗೆ ರೈಲ್ವೆ ಸಂಪರ್ಕ ಏರ್ಪಟ್ಟಿದೆ. ದೇಶದ ಪ್ರಮುಖ ರೇವುಪಟ್ಟಣಗಳು ಡರ್ಬನ್, ಕೇಪ್‍ಟೌನ್, ಪೋರ್ಟ್ ಎಲಿಜûಬತ್, ಈಸ್ಟ್ ಲಂಡನ್ ಮತ್ತು ಮಾಸೆಲ್ ಬೇ. ಪ್ರಮುಖ ವಿಮಾನ ನಿಲ್ದಾಣಗಳು ಜೋಹನಸ್‍ಬರ್ಗ್, ಕೇಪ್ ಟೌನ್, ಡರ್ಬನ್, ಬ್ಲೂಮ್ ಫಾಂಟೇನ್, ಈಸ್ಟ್ ಲಂಡನ್, ಪೋರ್ಟ್ ಎಲಿಜûಬತ್‍ಗಳಲ್ಲಿವೆ.								    
 (ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ